ಮೈಸೂರು: ಕೊರೊನಾ ಸೊಂಕು ಹಿನ್ನಲೆಯಲ್ಲಿ ಸರ್ವೆ ಕಾರ್ಯದಲ್ಲಿ ತೊಡಗಿದ್ದ ಆಶಾ ಕಾರ್ಯಕರ್ತೆ ಮೇಲೆ ಪುಂಡರ ಗುಂಪೊಂದು ಹಲ್ಲೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬನ್ನಿ ಮಂಟಪದ ಆಲೀಂ ನಗರದಲ್ಲಿ ಈ ಘಟನೆ ನಡೆದಿದ್ದು, ಸುಮಯಾ ಫಿರ್ದೋಶ್ ಎನ್ನುವ ಆಶಾ ಕಾರ್ಯಕರ್ತೆಗೆ ಪುಂಡರು ಧಮ್ಕಿ ಹಾಕಿದ್ದಾರೆ. ಸುಮಯಾ ಅವರು ಸರ್ವೆ ಕಾರ್ಯದಲ್ಲಿ ತೊಡಗಿದ್ದ ವೇಳೆಯಲ್ಲಿ ಬೀದಿ ಬದಿಯಲ್ಲಿ ಗುಂಪು ಗುಂಪಾಗಿ ಕುಳಿತುಕೊಂಡಿದ್ದ ಜನತೆಗೆ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿ, ಕಾನೂನಿಗೆ ಬೆಲೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಪುಂಡರು ನಿನ್ನದು ಜಾಸ್ತಿಯಾಗಿದೆ. ನೀನು ಯಾರು ನನಗೆ ಹೇಳೋದಕ್ಕೆ ನಿನ್ನ ಕೊಂದು ಬಿಡುವೆ ಅಂತ ಧಮ್ಕಿ ಹಾಕಿದ್ದಾರಂತೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ಕೂಡ ಇಂತದ್ದೇ ಘಟನೆ ನಡೆದಿತ್ತು. ಕೊರೊನಾ ಸೋಂಕಿತರು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿತ್ತು. ಭಾನುವಾರ ಕೊರೊನಾ ಶಂಕಿತ 58 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಪುಂಡರು ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.








