ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ – ನಾಯಕನಾಗಿ ಮತ್ತೊಂದು ದಾಖಲೆಯತ್ತ ವಿರಾಟ್ ಕೊಹ್ಲಿ..!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದ ಬರವನ್ನು ಎದುರಿಸುತ್ತಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಶತಕ ದಾಖಲಿಸದೇ ಎರಡು ವರ್ಷ ಕಳೆದಿದೆ.
ಈಗಾಗಲೇ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 43 ಶತಕಗಳನ್ನು ಸಿಡಿಸಿದ್ದಾರೆ. ಹಾಗೇ ಟೆಸ್ಟ್ ಕ್ರಿಕೆಟ್ ನಲ್ಲಿ 27 ಶತಕಗಳನ್ನು ದಾಖಲಿಸಿದ್ದಾರೆ.
ಪ್ರತಿ ಸರಣಿಯಲ್ಲೂ ಶತಕದ ಮೇಲೆ ಶತಕ ದಾಖಲಿಸುತ್ತಾ ದಾಖಲೆ ಬರೆಯುತ್ತಿದ್ದ ವಿರಾಟ್ ಕೊಹ್ಲಿ ಈಗ ಶತಕಕ್ಕಾಗಿ ಬಕಪಕ್ಷಿಯಂತೆ ಕಾಯುವಂತಹ ಪರಿಸ್ಥಿತಿಯಾಗಿದೆ.
ಏಕದಿನ ಕ್ರಿಕೆಟ್ ನಲ್ಲಿ 2019ರ ಆಗಸ್ಟ್ 14ರಂದು ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದರು. ಅದೇ ರೀತಿ ಟೆಸ್ಟ್ ಕ್ರಿಕೆಟ್ ನಲ್ಲಿ 2019ರ ನವೆಂಬರ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ದಾಖಲಿಸಿದ್ದರು. ಆನಂತರ ವಿರಾಟ್ ಹೆಸರಿಗೆ ಒಂದೇ ಒಂದು ಶತಕ ಸೇರ್ಪಡೆಯಾಗಿಲ್ಲ.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಶತಕ ದಾಖಲಿಸುತ್ತಾರೆ ಅನ್ನೋ ನಿರೀಕ್ಷೆಗಳಿವೆ. ಈಗಾಗಲೇ ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆಯೂ ಕ್ರಿಕೆಟ್ ಪಂಡಿತರು ನಾನಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮಹತ್ವದ ಪಂದ್ಯಗಳಲ್ಲಿ ನೆಲಕಚ್ಚಿ ನಿಂತು ಆಡುವ ಸಾಮಥ್ರ್ಯವಿರುವುದರಿಂದ ಸಹಜವಾಗಿ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಭರವಸೆ ಮತ್ತು ನಂಬಿಕೆ ಇದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸಿಂಹಸ್ವಪ್ನರಾಗಿ ಕಾಡುವ ಸಾಧ್ಯತೆಗಳು ಇವೆ.
ಇನ್ನೊಂದೆಡೆ ಟೆಸ್ಟ್ ಚಾಂಪಿಯನ್ ಷಿಪ್ ಫೈ&ನಲ್ ಪಂದ್ಯದಲ್ಲಿ ವಿರಾಟ್ ಶತಕ ಸಿಡಿಸಿದ್ರೆ ಮತ್ತೊಂದು ದಾಖಲೆಯನ್ನು ಬರೆಯಲಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಒಟ್ಟು 70 ಶತಕಗಳನ್ನು ದಾಖಲಿಸಿದ್ದಾರೆ. ಇದ್ರಲ್ಲಿ ಟೀಮ್ ಇಂಡಿಯಾದ ನಾಯಕನಾಗಿ ವಿರಾಟ್ ಕೊಹ್ಲಿ ಸದ್ಯ 41 ಶತಕಗಳನ್ನು ದಾಖಲಿಸಿದ್ದಾರೆ. ಈ ಮೂಲಕ ನಾಯಕನಾಗಿ ಅತೀ ಹೆಚ್ಚು ಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಜೊತೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ ಕೂಡ 41 ಶತಕಗಳನ್ನು ಸಿಡಿಸಿದ್ದರು.
ಜೂನ್ 18ರಿಂದ ಸೌತಾಂಪ್ಟನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಫೈನಲ್ ಪಂದ್ಯದಲ್ಲಿ ವಿರಾಟ್ ಶತಕ ಸಿಡಿಸಿದ್ರೆ, ನಾಯಕನಾಗಿ ಗರಿಷ್ಠ ಶತಕ ಸಿಡಿಸಿದ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಒಟ್ಟಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ಹಲವು ಮಹತ್ವದ ದಾಖಲೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ.








