ಬಲಿಷ್ಠ ಟೀಮ್ ಇಂಡಿಯಾ ಕಟ್ಟಿದ್ದು ದಾದಾ ಅಲ್ಲ.. ರಾಹುಲ್ ದ್ರಾವಿಡ್ – ಸುರೇಶ್ ರೈನಾ
ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಬಿಗ್ ಬಾಸ್ ಗಳಿಗೂ ಆಘಾತವನ್ನು ನೀಡಿದ್ದಾರೆ.
ಸುರೇಶ್ ರೈನಾ ಅವರು ತನ್ನ ಕ್ರಿಕೆಟ್ ಬದುಕನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ತಾನು ಟೀಮ್ ಇಂಡಿಯಾದ ಆಟಗಾರನಾಗಿ ರೂಪುಗೊಂಡಿದ್ದು ಹೇಗೆ ? ಕ್ರಿಕೆಟ್ ಬದುಕಿನಲ್ಲಿ ಪಟ್ಟ ಕಷ್ಟ, ನೋವು, ನಲಿವುಗಳಿಗೆ ಅಕ್ಷರ ರೂಪವನ್ನು ಕೊಟ್ಟಿದ್ದಾರೆ.
ಈ ನಡುವೆ ಕೆಲವೊಂದು ವಿವಾದಗಳಿಗೆ ಕಾರಣವಾಗುವಂತಹ ಅಂಶಗಳನ್ನು ಸುರೇಶ್ ರೈನಾ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಮಾಜಿ ಆಟಗಾರರಿಗೂ ಮುಜುಗರವನ್ನುಂಟು ಮಾಡುವ ಸಂಗತಿಗಳನ್ನು ಕೂಡ ಸುರೇಶ್ ರೈನಾ ತನ್ನ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಹೌದು, ಭಾರತ ಕ್ರಿಕೆಟ್ ತಂಡವನ್ನು ಟೀಮ್ ಇಂಡಿಯಾ ಎಂಬ ಹೆಸರಿನ ಮೂಲಕ ಹೊಸ ಆಯಾಮವನ್ನು ನೀಡಿದ್ದು ಸೌರವ್ ಗಂಗೂಲಿ. ಅದರಲ್ಲಿ ಎರಡು ಮಾತಿಲ್ಲ. ಯುವ ಆಟಗಾರರಿಗೆ ಅವಕಾಶವನ್ನು ನೀಡಿ ಟೀಮ್ ಇಂಡಿಯಾದ ಮನೋಭಾವನೆಯನ್ನು ಬದಲಾಯಿಸಿದ್ದು ಸೌರವ್ ಗಂಗೂಲಿ.
ಅದೇ ರೀತಿ ಮಹೇಂದ್ರ ಸಿಂಗ್ ಧೋನಿ. ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ಧೋನಿ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್, 2011ರ ಏಕದಿನ ವಿಶ್ವಕಪ್, ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನಕ್ಕೇರಿಸಿದ್ದು ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದ ಟೀಮ್ ಇಂಡಿಯಾ.
ಆದ್ರೆ ಸುರೇಶ್ ರೈನಾ ಅವರ ಪ್ರಕಾರ ಟೀಮ್ ಇಂಡಿಯಾವನ್ನು ಬಲಿಷ್ಠವಾಗಿ ಕಟ್ಟಿದ್ದಲ್ಲದೆ ಭದ್ರ ಪೌಂಡೇಷನ್ ಹಾಕಿಕೊಟ್ಟಿದ್ದು ರಾಹುಲ್ ದ್ರಾವಿಡ್ ಎಂದು ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ನಾನು ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದು ಸೌರವ್ ಗಂಗೂಲಿ ಎಂದು ಹೇಳಲು ಬಯಸುವುದಿಲ್ಲ. ನಿಜ, ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನಡೆಸಿ ಯಶಸ್ವಿನ ಉತ್ತುಂಗಕ್ಕೇರಿಸಿದ್ರು. ಆದ್ರೆ ಮೂರು ಮಾದರಿಯ ಕ್ರಿಕೆಟ್ ತಂಡಗಳನ್ನು ಬಲಿಷ್ಠವಾಗಿ ಕಟ್ಟಲು ಜವಾಬ್ದಾರಿ ವಹಿಸಿಕೊಂಡಿದ್ದು ರಾಹುಲ್ ದ್ರಾವಿಡ್ ಎಂದು ಸುರೇಶ್ ರೈನಾ ತನ್ನ ಬಿಲೀವ್ ಪುಸ್ತಕರದಲ್ಲಿ ಬರೆದಿದ್ದಾರೆ.
ಇನ್ನು ಟೀಮ್ ಇಂಡಿಯಾದ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದರು. ಸೌರವ್ ಗಂಗೂಲಿ ನಾಯಕತ್ವದಿಂದ ಕೆಳಗಿಳಿಯಲು ಚಾಪೆಲ್ ಕಾರಣ ಎಂದು ಹೇಳಿದ್ದರು. ಅದೇ ರೀತಿ ಬ್ಯಾಟಿಂಗ್ ನಲ್ಲಿ ಬದಲಾವಣೆ ಮಾಡಿರೋದಕ್ಕೆ ಅಸಮಾಧಾನಕ್ಕೆ ಸಚಿನ್ ತೆಂಡುಲ್ಕರ್ ರಿಂಗ್ ಮಾಸ್ಟರ್ ಎಂದು ಕರೆದಿದ್ದರು.
ಆದ್ರೆ ಸುರೇಶ್ ರೈನಾ ಪ್ರಕಾರ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿದ್ದು ಕೋಚ್ ಗ್ರೆಗ್ ಚಾಪೆಲ್ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಸುರೇಶ್ ರೈನಾ ಅವರ ಪ್ರತಿಭೆಯನ್ನು ಗುರುತಿಸಿದ್ದು ಮೊದಲು ಗ್ರೆಗ್ ಚಾಪೆಲ್. ಹೀಗಾಗಿಯೇ ಚಾಪೆಲ್ ಮೇಲೆ ರೈನಾಗೆ ಪ್ರೀತಿ, ಅಭಿಮಾನ ಇರೋದು ಸಹಜ. ಆದ್ರೆ ರೈನಾ ಟೀಮ್ ಇಂಡಿಯಾಗೆ ಬರುವುದಕ್ಕಿಂತ ಮೊದಲು ಟೀಮ್ ಇಂಡಿಯಾದಲ್ಲಿ ಏನೇನು ಆಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕಿತ್ತು.
ಒಟ್ಟಿನಲ್ಲಿ ಸುರೇಶ್ ರೈನಾ ಅವರ ಬದುಕಿನ ಪುಸ್ತಕದಲ್ಲಿ ರಾಹುಲ್ ದ್ರಾವಿಡ್ ಅವರಿಗೆ ವಿಶೇಷವಾದ ಸ್ಥಾನಮಾನ ಗೌರವನ್ನು ನೀಡಿದ್ದಾರೆ. ಬಹುಶಃ ರಾಹುಲ್ ದ್ರಾವಿಡ್ ಕ್ರಿಕೆಟ್ ಆಡುತ್ತಿರುವಾಗಿನ ಜನಪ್ರಿಯತೆಗಿಂತ ಇದೀಗ ಕೋಚ್ ಆಗಿ, ಎನ್ ಸಿಎ ಮುಖ್ಯಸ್ಥರಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಯಾಕಂದ್ರೆ ಟೀಮ್ ಇಂಡಿಯಾದ ಇವತ್ತಿನ ಯಶಸ್ಸಿನ ಶ್ರೇಯ ಮತ್ತು ಯುವ ಆಟಗಾರರ ಆಟದ ವೈಖರಿಗೆ ಮೂಲ ಕಾರಣ ರಾಹುಲ್ ದ್ರಾವಿಡ್ ಎಂಬುದರಲ್ಲಿ ಎರಡು ಮಾತಿಲ್ಲ.








