ತ್ರಿಪುರಾ: ಗೋ ಕಳ್ಳಸಾಗಣೆ ಶಂಕೆ, ಮೂವರಿಗೆ ಥಳಿಸಿ ಹತ್ಯೆ..!
ತ್ರಿಪುರಾ : ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದ ಶಂಕೆಯ ಮೇರೆಗೆ ಮೂವರಿಗೆ ತೀವ್ರವಾಗಿ ಥಳಿಸಿ ಹತ್ಯೆ ಮಾಡಲಾಗಿರುವ ಘಟನೆ ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಥಳಿತಕ್ಕೊಳಗಾಗಿ ಹತ್ಯೆಯಾದವರನ್ನು ಜಾಯಿದ್ ಹುಸೈನ್ (30), ಬಿಲಾಲ್ ಮಿಯಾ (28), ಸೈಫುಲ್ ಇಸ್ಲಾಂ (18) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸೆಪಾಹಿಜಾಲಾ ಜಿಲ್ಲೆಯ ಸೋನಾಮುರ ಉಪವಲಯದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ನಮನ್ಜ್ಯೋಯ್ಪಾರಾದ ಗ್ರಾಮಸ್ಥರು ಅಗರ್ತಲಾ ಮಾರ್ಗದಲ್ಲಿ ಐದು ಹಸುಗಳನ್ನು ಹೊತ್ತು ಸಂಚರಿಸುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಇದರಲ್ಲಿದ್ದ ಮೂರು ಮಂದಿಯನ್ನು ಮಾರಕಾಸ್ತ್ರಗಳಿಂದ ಹೊಡೆದಿದ್ದು, ಓರ್ವ ಪರಾರಿಯಾಗಲು ಯತ್ನಿಸಿದ್ದಾನೆ ಆದರೆ ಉತ್ತರ ಮಹರಣಿಪುರದಲ್ಲಿ ಆತನನ್ನು ಹಿಡಿದು ಥಳಿಸಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಥಳಿತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ.
5 ಜಾನುವಾರಗಳಿದ್ದ ಮಿನಿ ಟ್ರಕ್ಕೊಂದು ಅಗರ್ತಲದತ್ತ ತೆರಳುತ್ತಿರುವುದನ್ನು ಮುಂಜಾನೆ 4.30ರ ಹೊತ್ತಿಗೆ ನಮನಜೋಯಪಾರಾದ ಗ್ರಾಮ ನಿವಾಸಿಗಳು ಗಮನಿಸಿದ್ದರು ಎಂದು ಪೊಲೀಸ್ ಅಧೀಕ್ಷಕ ಕಿರಣ್ ಕುಮಾರ್ ಹೇಳಿದ್ದಾರೆ. ಅವರು ಮಿನಿ ಟ್ರಕ್ಕ್ ಅನ್ನು ಹಿಂಬಾಲಿಸಿಕೊಂಡು ಹೋಗಿ ಉತ್ತರ ಮಹಾರಾಣಿಪುರ ಗ್ರಾಮದಲ್ಲಿ ನಿಲ್ಲಿಸುವಲ್ಲಿ ಸಫಲರಾದರು. ಮಿನಿ ಟ್ರಕ್ನಲ್ಲಿದ್ದ ಮೂವರ ಮೇಲೆ ಗ್ರಾಮ ನಿವಾಸಿಗಳು ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ.
ಇವರಲ್ಲಿ ಸೈಫುಲ್ಲಾ ಗ್ರಾಮ ನಿವಾಸಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದ. ಗ್ರಾಮ ನಿವಾಸಿಗಳು ಆತನನ್ನು ಉತ್ತರ ಮಹಾರಾಣಿಪುರದ ಬುಡಕಟ್ಟು ಕುಗ್ರಾಮ ಮುಂಗಿಯಾಕಾಮಿಯಲ್ಲಿ ಸೆರೆ ಹಿಡಿದು ಥಳಿಸಿದರು ಎಂದು ತಿಳಿಸಿದ್ದಾರೆ.








