ನಮ್ಮ ಕುಮಾರಣ್ಣ ಮತ್ತೆ ಸಿಎಂ ಆಗೇ ಆಗುತ್ತಾರೆ : ಟಿ.ಎ.ಶರವಣ
ಬೆಂಗಳೂರು : ಜಮೀರ್ ಅಹಮದ್ ಹೇಳಿದ ತಕ್ಷಣ ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ. ನಮ್ಮ ಕುಮಾರಣ್ಣ ಮತ್ತೆ ಸಿಎಂ ಆಗೇ ಆಗುತ್ತಾರೆ ಎಂದು ಜೆಡಿಎಸ್ ಮುಖಂಡ ಟಿ.ಎ. ಶರವಣ ಭವಿಷ್ಯ ನುಡಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶರವಣ, ಜಮೀರ್ ಅಹ್ಮದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶಾಸಕ ಜಮೀರ್ ಅಹಮದ್ ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಕುಮಾರಣ್ಣ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವುದು ಸರಿಯಲ್ಲ. ನಮ್ಮ ನಾಯಕರ ಬಗ್ಗೆ ಮಾತನಾಡಿರುವುದು ಪಕ್ಷದ ಕಾರ್ಯಕರ್ತರಿಗೆ ಬಹಳ ಬೇಸರ ಮೂಡಿಸಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗಬಹುದು ಎಂದುಕೊಂಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಬಗ್ಗೆ ಯಾಕೆ ಹೀಗೆ ಮಾತನಾಡುತ್ತೀರಾ..? ಒಂದು ಸಮುದಾಯವನ್ನು ಜಮೀರ್ ಅಹಮದ್ ಟಾರ್ಗೆಟ್ ಮಾಡ್ತಿದ್ದಾರೆ. ಜೆಡಿಎಸ್‍ನಲ್ಲಿ ಇದ್ದಾಗ ಅಧಿಕಾರ ಅನುಭವಿಸಿ, ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ. ಕೂಡಲೇ ಕುಮಾರಣ್ಣ ಅವರ ಬಳಿ ಕ್ಷಮೆ ಕೇಳಬೇಕು. ಇನ್ನು ಮುಂದೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ನಮ್ಮ ನಾಯಕರು ಇವರಂತೆ ಚಿಲ್ಲರೆ ರಾಜಕೀಯ ಮಾಡಲ್ಲ. ಸಹವಾಸ ದೋಷ ಬಿಟ್ಟಿದ್ದೇನೆ ಅಂತಾ ಕುಮಾರಣ್ಣ ಹೇಳಿದ್ದಾರೆ. ವೈಯಕ್ತಿಕ ಹೇಳಿಕೆ ನೀಡುವುದನ್ನು ನಿಲ್ಲಿಸಿ. ರಾಜ್ಯದ ಜನ ನಿರ್ಧಾರ ಮಾಡುತ್ತಾರೆ. ಜಮೀರ್ ಅಹಮದ್ ಹೇಳಿದ ತಕ್ಷಣ ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ. ನಮ್ಮ ಕುಮಾರಣ್ಣ ಮತ್ತೆ ಸಿಎಂ ಆಗೇ ಆಗುತ್ತಾರೆ ಎಂದು ಭವಿಷ್ಯ ನುಡಿದರು.









