ಗ್ಯಾರಂಟಿ (GUARANTEE) ಯೋಜನೆಗೆ ಸರ್ಜರಿ ಬೆನ್ನಲ್ಲೇ ಇದೀಗ ರಾಜ್ಯದ ಲಕ್ಷ ಲಕ್ಷ ವೃದ್ಧರಿಗೆ ದೊಡ್ಡ ಆಘಾತವನ್ನೇ ಕೊಟ್ಟಿದೆ ಕಾಂಗ್ರೆಸ್ 2.0 ಸರ್ಕಾರ.. ಒಂದಲ್ಲಾ ಎರಡಲ್ಲಾ… 16 ಲಕ್ಷ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಂಡಿದೆ.. ಒಂದೆಡೆ ಗ್ಯಾರಂಟಿ ಯೋಜನೆಗಳು ಹೊರೆಯಲ್ಲ ಎನ್ನುತ್ತಲೇ 3 ವರ್ಷಗಳ ಸಾಗಿಸಿದ ‘ಗ್ಯಾರಂಟಿ’ ಸರ್ಕಾರ ಅತ್ತ ‘ಗೃಹಲಕ್ಷ್ಮೀ’ ‘ಗೃಹಜ್ಯೋತಿ’ ಯೋಜನೆಗಳಲ್ಲಿ ಬದಲಾವಣೆಗಳನ್ನ ತರಹೊರಟಿದೆ.. ಮತ್ತೊಂದೆಡೆ ಪಿಂಚಣಿಯಲ್ಲಿ ಲಕ್ಷ ಲಕ್ಷ ಫಲಾನುಭವಿಗಳಿಗೆ ಕೊಕ್ ಕೊಟ್ಟಿರೋದು, ಆರ್ಥಿಕ ಸಂಕಷ್ಟದಲ್ಲಿ ಸರ್ಕಾರವಿದ್ಯಾ ಅನ್ನೋ ಸವಾಲಿಗೆ ಒಂದು ಪರೋಕ್ಷ ಉತ್ತರ ಎನಬಹುದು..

ಎಸ್.. ರಾಜ್ಯದಲ್ಲಿ ಪಿಂಚಣಿ ಫಲಾನುಭವಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ಕಳೆದ ಮೂರು ತಿಂಗಳಿನಿಂದ ಸುಮಾರು 16 ಲಕ್ಷ ಜನರಿಗೆ ಪಿಂಚಣಿ ಹಣ ಜಮೆಯಾಗದೇ ಇರುವುದರಿಂದ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದು, ಈ ಪೈಕಿ ಸುಮಾರು 16 ಲಕ್ಷ ಜನರ ಪಿಂಚಣಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಬ ಆರೋಪ ಕೇಳಿಬಂದಿದೆ. ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ನೆರವು ಪಡೆಯುತ್ತಿದ್ದವರಿಗೆ ಇದರಿಂದ ತೀವ್ರ ಹೊಡೆತ ಬಿದ್ದಿದೆ. ಪ್ರತಿ ತಿಂಗಳು ಸುಮಾರು 82 ಲಕ್ಷ ಜನರಿಗೆ ಪಿಂಚಣಿ ನೀಡಲು ಸರ್ಕಾರ 400 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ಇದೀಗ 16 ಲಕ್ಷ ಫಲಾನುಭವಿಗಳನ್ನು ಕೈಬಿಟ್ಟಿರುವುದರಿಂದ ಸುಮಾರು 150 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎನ್ನಲಾಗಿದೆ.

ಪಿಂಚಣಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ 70 ರಿಂದ 81 ವರ್ಷದ ಹಿರಿಯ ನಾಗರಿಕರು ಕಂದಾಯ ಇಲಾಖೆ ಕಚೇರಿಗಳ ಮೆಟ್ಟಿಲೇರಿದ್ದು, ತಮ್ಮ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡುತ್ತಿದ್ದಾರೆ. ಮನೆ ಖರ್ಚು, ಔಷಧಿ ಖರೀದಿ ಹಾಗೂ ದಿನನಿತ್ಯದ ಜೀವನ ನಿರ್ವಹಣೆಗೆ ಪಿಂಚಣಿಯೇ ಆಧಾರವಾಗಿತ್ತು ಎಂದು ವೃದ್ಧರು ಹೇಳುತ್ತಿದ್ದಾರೆ. “ಮೂರು-ನಾಲ್ಕು ವರ್ಷಗಳಿಂದ ಹಣ ಬರುತ್ತಿತ್ತು, ಈಗ ಏಕಾಏಕಿ ನಿಲ್ಲಿಸಿದ್ದಾರೆ. ನಾಲ್ಕು-ಐದು ತಿಂಗಳಿನಿಂದ ಹಣ ಜಮೆಯಾಗಿಲ್ಲ. ನಮ್ಮ ದಾಖಲೆಗಳೆಲ್ಲ ಸರಿಯಾಗಿವೆ. ಸರ್ಕಾರ ದಯವಿಟ್ಟು ಪಿಂಚಣಿ ಮರುಪ್ರಾರಂಭಿಸಬೇಕು” ಎಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ. ಪಿಂಚಣಿ ಸ್ಥಗಿತದಿಂದ ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚುತ್ತಿದೆ.








