ಆದ್ರೆ ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವುದರ ಕುರಿತು ನನ್ನ ಸ್ಪಷ್ಟ ತಕರಾರು ಇದೆ. I dont support for this.
ರಾಜ್ಯಾದ್ಯಂತ, ದೇಶಾದ್ಯಂತ 144 ಸೆಕ್ಷನ್ ಇರಲಿ. ಸೋಶಿಯಲ್ ಡಿಸ್ಟೆನ್ಸಿಂಗ್ ಮತ್ತು ಮಾಸ್ಕ್ ಕಡ್ಡಾಯವಾಗಿ ಜಾರಿಯಲ್ಲಿರಲಿ, ಆದರೆ ಲಾಕ್ ಡೌನ್ ಮುಂದುವರೆಸುವ ನಿರ್ಧಾರ ಬೇಡ. ಮಧ್ಯಮ ವರ್ಗ ನಾಶವಾಗಿ ಹೋಗತ್ತೆ. ಕೆಳ ವರ್ಗದ ಜನ ತುತ್ತಿನ ಅನ್ನಕ್ಕೂ ಹಾಹಾಕಾರ ಎದುರಿಸಬೇಕಾಗತ್ತೆ. ಇದಕ್ಕಿಂತ ಕರೋನಾದಿಂದ ನರಳಿ ಸಾಯುವುದೇ ಉತ್ತಮ. ನೀವು ಕೊಡುವ ಉಚಿತ ರೇಷನ್ ಆಗಲಿ, ಹಾಲಾಗಲೀ ನಮ್ಮ ಈ ಭ್ರಷ್ಟ ವ್ಯವಸ್ಥೆಯಲ್ಲಿ ಬಡಜನರನ್ನು ಪೂರ್ತಿಯಾಗಿ ತಲುಪುವುದಿಲ್ಲ ಅನ್ನುವ ಸತ್ಯ ಒಪ್ಪಿಕೊಳ್ಳಿ.
ವಿಜ್ಞಾನ ಲೋಕದ ಪ್ರಕಾರ ಈ ವೈರಸ್ ಶಾಶ್ವತವಾಗಿಯಂತೂ ಸದ್ಯಕ್ಕೆ ನಾಶವಾಗಲ್ಲ, ಆದ್ರೆ ವೈರಸ್ ನಿಯಂತ್ರಣದ ಹೆಸರಲ್ಲಿ ನಾವೆಲ್ಲಾ ಖಂಡಿತಾ ನಾಶವಾಗ್ತೀವಿ. ನಮಗೆ ಅಮೇರಿಕಾ ಯೂರೋಪ್ ನ ರಾಷ್ಟ್ರಗಳಂತೆ ತಿಂಗಳಿಗೊಮ್ಮೆ ವೇತನ ಬರುವುದಿಲ್ಲ. ಅವತ್ತಿನ ಅನ್ನ ಅವತ್ತೇ ದುಡಿದು ಬದುಕುವ ಮೂರನೆ ಎರಡು ಭಾಗ ಜನಸಂಖ್ಯೆ ಇಲ್ಲಿ ಬದುಕುತ್ತಿದೆ. ಈಗಾಗಲೇ ಜನರಲ್ಲಿ ಸಣ್ಣಗೆ ಅರಿವು ಮೂಡುತ್ತಿದೆ. ಜನಜಾಗೃತಿ ಹೆಚ್ಚು ಮಾಡಲು ಯೋಚಿಸಿ. ಕೆಲವು ಉಪದ್ವ್ಯಾಪಿಗಳಿದ್ದಾರೆ ನಿಜ. ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ. ಕರೋನಾ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಒಂದಷ್ಟು ಹೆಚ್ಚಿನ ನಿಗಾ ಖಂಡಿತಾ ಬೇಕು. ಹಾಗಂತ ಇಡೀ ದೇಶದಲ್ಲಿ ಲಾಕ್ ಡೌನ್ ಮುಂದುವರೆಸೊದ್ರಲ್ಲಿ ಅರ್ಥವೇ ಇಲ್ಲ.
ಮಧ್ಯ ಪ್ರದೇಶದಲ್ಲಿರುವ ಭಾವ ಕಾಲ್ ಮಾಡಿದಾಗ ಹೇಳ್ತಿದ್ದರು ಅಲ್ಲಿ ಹೋಟೆಲ್ ಲಾಡ್ಜ್ ಗಳಲ್ಲಿ ಬಂಧಿಯಾಗಿರುವವರ ಬಳಿ ಹಣ ಮುಗಿದಿದೆ. ಮನೆಗೆ ಹೋಗಲು ಅನುಮತಿ ಇಲ್ಲ. ಇನ್ನೆಲ್ಲೋ ಅಡಿಕೆ ವ್ಯಾಪಾರಕ್ಕೆ ಹೋಗಿದ್ದ ಪುತ್ತೂರಿನ ವರ್ತಕರು ಮಹಾರಾಷ್ಟ್ರ ಗಡಿಯಲ್ಲಿ ಲಾಕ್ ಆಗಿದ್ದಾರೆ. ಕಾರ್ ನಲ್ಲೇ ಬಿಡಾರ ಹೂಡಿದ್ದಾರೆ. ಅವರ ಬಳಿಯೂ ಹಣ ಮುಗಿಯುತ್ತಾ ಬಂದಿದೆ. ವಲಸೆ ಕೂಲಿ ಕಾರ್ಮಿಕರು ಎಲ್ಲೆಲ್ಲೋ ಸಿಕ್ಕಿ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಅವರೆಲ್ಲಾ ತಮ್ಮ ಗೂಡು ಸೇರಿಕೊಳ್ಳಲು ಅವಕಾಶ ಮಾಡಿಕೊಡಿ.
ಸಾರಿಗೆ ವ್ಯವಸ್ಥೆ ಬೇಕಿದ್ದರೆ ಒಂದಷ್ಟು ದಿನ ಮುಂದೂಡಿ. ರೈಲುಗಳನ್ನು ಓಡಿಸಬೇಡಿ. ಇಂಟರ್ ನ್ಯಾಷನಲ್ ಫ್ಲೈಟ್ ಗಳನ್ನು ಬೇಕಿದ್ದರೆ ಇನ್ನೂ ಒಂದು ತಿಂಗಳು ತಡೆ ಹಿಡಿಯಿರಿ. ಕಟ್ಟುನಿಟ್ಟಿನ ಸೂಚನೆಗಳೊಂದಿಗೆ ಡೊಮೇಸ್ಟಿಕ್ ವಿಮಾನಗಳಿಗೆ ಅವಕಾಶ ಕೊಡಬಹುದು. ಅದರಲ್ಲೂ ಕಠಿಣ ನಿಯಮಗಳನ್ನೂ ಜಾರಿಗೆ ತನ್ನಿ. ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್ ಕಡ್ಡಾಯವಿರಲಿ. ಸೋಂಕಿತರನ್ನು ವಿಮಾನ ಹತ್ತಿಸಬೇಡಿ. ಹೊರಭಾಗದಿಂದ ಬರುವ ಯಾರಿಗೆ ಆದರೂ ಹೋಂ ಕ್ವಾರಂಟೈನ್ ಸ್ಟ್ರಿಕ್ಟ್ ಆಗಿ ಪಾಲಿಸಲು ಸೂಚನೆ ನೀಡಿ.
ರಾಜ್ಯಗಳ ಗಡಿ ಬಂದ್ ಮಾಡಿ ಆದ್ರೆ ಅಂತರ್ ರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡಿ. ಪೊಲೀಸ್ ಇಲಾಖೆಯ ಜೊತೆ ಸರ್ಕಾರದ ಬೇರೆ ಬೇರೆ ಇಲಾಖೆಯ ಖಾಲಿ ಕೂತಿರುವ ಸಿಬ್ಬಂದಿಗಳನ್ನೂ ಬಳಸಿಕೊಂಡು ನಿಯಮ ಜಾರಿಯಾಗುವಂತೆ ನೋಡಿಕೊಳ್ಳಿ. ನಿಮಗೆ ಲಾಕ್ ಡೌನ್ ಮುಂದುವರೆಸುವಂತೆ ವರದಿ ಯಾರಾದರೂ ಕೊಡಲಿ ಅವರಿಗೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲ ಎಂದೇ ಅರ್ಥ. ಡಬ್ಲ್ಯೂ ಹೆಚ್ ಓ ಅನ್ನೋ ನಿರ್ಲಜ್ಜ ಬೇಜವಬ್ದಾರಿ ಬಿಕನಾಸಿ ಸಂಸ್ಥೆಯ ಶಿಫಾರಸ್ಸಾಗಲೀ, ಬಿಬಿಸಿ ಅನ್ನುವ ಭಾರತದ ಬಡತನ ದರಿದ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲು ಮಾಡಲು ಕಾಯುವ ಗ್ಲೋಬಲ್ ಸುದ್ದಿ ಮಾಧ್ಯಮದ ತಾಕೀತಿಗಾಗಲೀ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಭಾರತ ಇಂತಹ ನೂರು ವೈರಸ್ ದಾಳಿಗಳಿಂದ ಹೊರಬರುವ ಚೈತನ್ಯ ಜೀವಂತಿಕೆ ಹೊಂದಿದೆ.
ಮೇ 3 ಕ್ಕೆ ಇನ್ನೂ 11 ದಿನವಿದೆ. ಈಗಲಾದರೂ ಕೇವಲ 11 ದಿನಗಳ ಮಟ್ಟಿಗೆ ಕರ್ಫ್ಯೂ ಮಾಧರಿಯ ಕಂಪ್ಲೀಟ್ ಲಾಕ್ ಡೌನ್ ಜಾರಿ ಮಾಡಿ ನೋಡಿ. ಜನರ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿ ಸಾಕು. ಶೇ.80 ನಿಯಂತ್ರಣ ಬರದಿದ್ದರೆ ನೋಡಿ. ಆಮೇಲೆ ನಿಮಗೆ ಲಾಕ್ ಡೌನ್ ಮುಂದುವರೆಸುವ ಅಗತ್ಯವೇ ಬಾರದು. ನಿಯಮಗಳನ್ನು ಸರಿಯಾಗಿ ಜಾರಿ ಮಾಡದೇ ಜನರನ್ನು ಬಲಿ ಕೊಡಬೇಡಿ. ಕೃಷಿ ಮತ್ತು ಉತ್ಪಾದನಾ ವಲಯಗಳ ಕಾರ್ಮಿಕರಿಗೆ ದುಡಿಯಲು ಅವಕಾಶ ಕೊಡಿ. ಅಗತ್ಯ ಬಿದ್ದರೆ ಅಲ್ಲಿಯೂ ಕಠಿಣ ನಿಯಮ, ಸ್ಕ್ರೀನಿಂಗ್, ಕಡ್ಡಾಯ ತಪಾಸಣೆ ಇವೆಲ್ಲಾ ಇರಲಿ.
ದೇವಾಲಯ, ಮಸೀದಿ, ಚರ್ಚು, ಧಾರ್ಮಿಕ ಸಭೆ, ಸೆಮಿನಾರು, ಮದುವೆ ಮುಂಜಿ ಸಮಾರಂಭ, ಹೋಟೆಲ್, ಬಾರ್, ರೆಸಾರ್ಟ್, ಸಾರ್ವಜನಿಕ ಕಾರ್ಯಕ್ರಮ, ಇದ್ಯಾವುದೂ ಬೇಡ. ಆದ್ರೆ ದುಡಿಯುವ ಕೈಗಳನ್ನು ಮಾತ್ರ ಕಟ್ಟಿ ಹಾಕಬೇಡಿ. ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಮತ್ತು ಕೆಳವರ್ಗಗಳ ರೈತರು ಕಾರ್ಮಿಕರೇ ಭಾರತದ ಆತ್ಮ; ಇವರೇ ಬಹುಸಂಖ್ಯಾತರು. ಇವರು ನಾಶವಾದರೆ ಭಾರತವೇ ನಾಶವಾದಂತೆ.
#ಲಾಕ್ಡೌನ್ಮುಂದುವರೆಯೋದುಬೇಡ
#ಕಾನೂನುಬಿಗಿಮಾಡಿಸಾಕು
#ಮಧ್ಯಮವರ್ಗವನ್ನುಕೊಲ್ಲಬೇಡಿ








