ನವದೆಹಲಿ: ಕೊರೊನಾ ವೈರಸ್ ನೀಡಿರುವ ಆರ್ಥಿಕ ಹೊಡೆತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಮುಂದಿನ ವರ್ಷ ಜುಲೈ ತಿಂಗಳಿನವರೆಗೂ, ಕೇಂದ್ರ ಸರ್ಕಾರದ ನೌಕರರಿಗೆ ಡಿಎಯಲ್ಲಿ(ತುಟ್ಟಿಭತ್ಯೆ) ಏರಿಕೆ ಮಾಡಲ್ಲ ಅಂತಾ ತಿಳಿಸಿದೆ. ಅಲ್ಲದೆ ಈಗಾಗಲೇ ಘೋಷಣೆ ಮಾಡಿರುವ ಶೇಕಡಾ ನಾಲ್ಕರಷ್ಟು ಏರಿಕೆಯನ್ನು ತಡೆ ಹಿಡಿದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಟ್ವಿಟ್ಟರ್ ನಲ್ಲಿ ಕೇಂದ್ರದ ನಡೆಯನ್ನು ‘ಅಮಾನವೀಯ’ ಎಂದು ಕರೆದಿರುವ ರಾಹುಲ್ ಗಾಂಧಿ, ಇದರ ಬದಲು ಬುಲೆಟ್ ರೈಲು ಹಾಗೂ ಮುಂತಾದ ಭಾರೀ ಯೋಜನೆಗಳನ್ನು ಮುಂದೂಡಿ ಹಣ ಉಳಿತಾಯ ಮಾಡಬಹುದಿತ್ತು ಎಂದು ಸಲಹೆ ನೀಡಿದ್ದಾರೆ.
लाखों करोड़ की बुलेट ट्रेन परियोजना और केंद्रीय विस्टा सौंदर्यीकरण परियोजना को निलंबित करने की बजाय कोरोना से जूझ कर जनता की सेवा कर रहे केंद्रीय कर्मचारियों, पेंशन भोगियों और देश के जवानों का महंगाई भत्ता(DA)काटना सरकार का असंवेदनशील तथा अमानवीय निर्णय है।https://t.co/LTGPf53VsA
— Rahul Gandhi (@RahulGandhi) April 24, 2020
ಅಲ್ಲದೆ ಕೇಂದ್ರ ಸರ್ಕಾರಿ ನೌಕರರು ಕಷ್ಟ ಅನುಭವಿಸುತ್ತಿಲ್ಲವೇ ಎಂದು ಪ್ರಶ್ನಿಸಿ, ನೌಕರರ ತುಟ್ಟಿಭತ್ಯೆಯನ್ನು ನಿಲ್ಲಿಸುವ ಬದಲು ಭಾರೀ ಯೋಜನೆಗಳನ್ನು ಮುಂದೂಡಿದ್ದರೆ ಸಾಕಾಗಿತ್ತು ಎಂದು ರಾಗಾ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್ ವಿರುದ್ಧ ಕೇಂದ್ರ ಸರ್ಕಾರಿ ನೌಕರರೂ ಹೋರಾಡುತ್ತಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಅವರ ನೆರವಿಗೆ ಬರುವ ಬದಲು ಅವರಿಂದಲೇ ತುಟ್ಟಿಭತ್ಯೆ ಕಸಿದುಕೊಂಡಿರುವ ಸರ್ಕಾರದ ನಡೆ ಸಮರ್ಥನೀಯವಲ್ಲ ಎಂದು ಗುಡುಗಿದ್ದಾರೆ.
ಕೊರೊನಾ ಹೊಡೆತದ ಹಿನ್ನೆಲೆಯಲ್ಲಿ 2021 ರ ಜುಲೈ 30 ರವರೆಗೆ ನೌಕರರಿಗೆ ತುಟ್ಟಿಭತ್ಯೆ ನೀಡದೇ ಇರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಕೇಂದ್ರ ಸರಕಾರದ ಪಿಂಚಣಿದಾರರಿಗೂ ಇದು ಅನ್ವಯವಾಗಲಿದೆ. ಕೇಂದ್ರದ ಈ ಕ್ರಮದಿಂದಾಗಿ 2020-21 ಮತ್ತು 2021-22ರ ಹಣಕಾಸು ವರ್ಷದಲ್ಲಿ ಒಟ್ಟು 1.20 ಲಕ್ಷ ಕೋಟಿ ರೂ.ಗಳನ್ನು ಉಳಿತಾಯ ಮಾಡಬಹುದಾಗಿದೆ ಎಂದು ಅಂದಾಜಿಸಲಾಗಿದೆ.








