ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಾನಹಾನಿ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ವಿರುದ್ಧ ದಾಖಲಾದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅವರಿಗೆ ಮೂರು ವಾರಗಳ ಕಾಲ ರಿಲೀಫ್ ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಗೋಸ್ವಾಮಿ ಬಂಧನಕ್ಕೆ ಮೂರು ವಾರಗಳ ಕಾಲ ತಡೆ ನೀಡಿದೆ. ನಾಗ್ಪುರದಲ್ಲಿ ದಾಖಲಾದ ಪ್ರಾಥಮಿಕ ಪ್ರಕರಣವನ್ನು ಹೊರತುಪಡಿಸಿ ಎಲ್ಲಾ ಎಫ್‌ಐಆರ್‌ಗಳ ವಿಚಾರಣೆಗೆ ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಪಾಲ್ಗರ್ ನಲ್ಲಿ ನಡೆದ ಹಿಂದೂ ಸಾಧುಗಳ ಹತ್ಯೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಅರ್ನಬ್ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಇದನ್ನು ಅವರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಇದಕ್ಕೀಗ ಕೋರ್ಟ್ ತಡೆ ನೀಡಿದೆ. ಜತೆಗೆ, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ.
ಪಾಲ್ಗರ್‌ನಲ್ಲಿ ನಡೆದ ಹಿಂದೂ ಸಾಧುಗಳ ಹತ್ಯೆಯ ವಿಷಯದಲ್ಲಿ ಸೋನಿಯಾ ಗಾಂಧಿ ಹೆಸರನ್ನು ಅರ್ನಬ್ ತೆಗೆದುಕೊಂಡಿದ್ದರು. ಈ ಕುರಿತು ತಮ್ಮ ರಿಪಬ್ಲಿಕ್ ಟಿವಿಯಲ್ಲಿ ಚರ್ಚಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಅರ್ನಬ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಛತ್ತೀಸಗಡ, ರಾಜಸ್ಥಾನ, ಪಂಜಾಬ್, ತೆಲಂಗಾಣ ಮತ್ತು ಜಮ್ಮು, ಕಾಶ್ಮೀರದಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಇದಕ್ಕೆ ತಡೆ ನೀಡುವಂತೆ ಅರ್ನಬ್ ಕೋರಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗೋಸ್ವಾಮಿ ಅರ್ಜಿಯನ್ನು ವಿಚಾರಣೆ ನಡೆಸಿದೆ.








