ಪೊಲೀಸ್ ಅಧೀಕ್ಷಕರಿಗೆ ಧಮ್ಕಿ ಹಾಕಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ..!
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಪೂರ್ವ ಮಿಟ್ನಾಪುರ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಕೆ.ಅಮರನಾಥ್ ಅವರಿಗೆ ಬಿಜೆಪಿ ನಾಯಕ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಧಮ್ಕಿ ಹಾಕಿದ್ದಾರೆ.. ಹೌದು.. ಜಮ್ಮು – ಕಾಶ್ಮೀರದ ಅನಂತನಾಗ್ ಅಥವಾ ಬಾರಾಮುಲ್ಲಾದಲ್ಲಿ ಕರ್ತವ್ಯ ನಿಭಾಯಿಸಬೇಕಾದ ಸ್ಥಿತಿಗೆ ಕಾರಣವಾಗುವ ಕೆಲಸ ಮಾಡಬೇಡಿ ಎಂದು ಬೆದರಿಕೆ ಹಾಕಿರೋದಾಗಿ ವರದಿಯಾಗಿದೆ.. ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿಯವರ ಕಚೇರಿಯಿಂದ ನಿಮಗೆ ಮಾಡಿದ ಎಲ್ಲ ದೂರವಾಣಿ ಕರೆಗಳ ವಿವರಗಳು ಮತ್ತು ದಾಖಲೆಗಳು ನನ್ನ ಬಳಿ ಇವೆ. ನಿಮಗೆ ರಾಜ್ಯ ಸರ್ಕಾರದ ಬೆಂಬಲ ಇದ್ದರೆ, ನನ್ನೊಂದಿಗೆ ಕೇಂದ್ರ ಸರ್ಕಾರ ಇದೆ.. ಬಿಜೆಪಿ ದುರ್ಬಲ ಎಂದು ತಿಳಿಯಬೇಡಿ ಎಂದು ಎಚ್ಚರಿಸಿದ್ದಾರೆ.
ಸುವೇಂದು ಅಪರಾಧ ಪಿತೂರಿ ಆರೋಪ ಎದುರಿಸುತ್ತಿರುವ ಟರ್ಪಲ್ ಕಳ್ಳತನ ಪ್ರಕರಣ ಹಾಗೂ 2018ರಲ್ಲಿ ಅವರ ಭದ್ರತಾ ಸಿಬ್ಬಂದಿ ಶಾಮೀಲಾಗಿದ್ದಾರೆ ಎನ್ನಲಾದ ಹತ್ಯೆ ಪ್ರಕರಣದ ಬಗ್ಗೆ ಪೂರ್ವ ಮಿಡ್ನಾಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.. ಇದರ ಬೆನ್ನಲ್ಲೇ ಈ ರೀತಿಯಾದ ಎಚ್ಚರಿಕೆ ನೀಡಲಾಗಿದೆ. ಹತ್ಯೆ ಪ್ರಕರಣವನ್ನು ಇದೀಗ ಸಿಐಡಿ ತನಿಖೆ ನಡೆಸುತ್ತಿದೆ. ಸುವೇಂದು ಅಧಿಕಾರಿ ಅಧ್ಯಕ್ಷರಾಗಿರುವ ಕೊಂತೈ ಸಹಕಾರ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಕೊಲ್ಕತ್ತಾ ಹೈಕೋರ್ಟ್‌ನ ಮೊರೆ ಹೋಗಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಮತ್ತು ಕಿರುಕುಳ ನೀಡುತ್ತಿರುವ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸುವುದಾಗಿ ಸುವೇಂದು ಹೇಳಿದ್ದಾರೆ.
ರಾಜ್ಯ ಸರಕಾರದ ವಿರುದ್ಧ ಪ್ರತಿ ಒತ್ತಡ ತರುವ ಸಲುವಾಗಿ ಆಗಸ್ಟ್ 9ರಂದು ಎಸ್ಪಿ ಕಚೇರಿಯ ಮುಂದೆ ಒಂದು ಲಕ್ಷ ಮಂದಿಯ ಸಭೆ ಆಯೋಜಿಸುವುದಾಗಿ ಅವರು ಹೇಳಿದ್ದಾರೆ. ಕೊಲ್ಕತ್ತಾದಲ್ಲಿ ರಾಜ್ಯ ಬಿಜೆಪಿಯ ರಾಹುಲ್ ಸಿನ್ಹಾ ಅವರನ್ನು ಕೋವಿಡ್ ಸಾಂಕ್ರಾಮಿಕದ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆರೋಪದಲ್ಲಿ ಬಂಧಿಸಲಾಗಿದೆ.