ನಾವಿದ್ದ ಜೆಡಿಎಸ್ ಪಾರ್ಟಿ ಈಗ ಇಲ್ಲ : ಸಿದ್ದರಾಮಯ್ಯ
ಕಾರವಾರ : ಬಿಜೆಪಿಯವರು ನಾವು ಸಾಚಾಗಳು, ಸಂಸ್ಕೃತಿವುಳ್ಳವರು ಅಂತಾ ಹೇಳ್ತಾರೆ. ಆದರೆ, ಭಾರತೀಯ ಜನತಾ ಪಾರ್ಟಿಯವರಂಥ ಸಂಸ್ಕೃತಿ ಇಲ್ಲದ ಜನ ಬೇರೆ ಯಾರೂ ಇಲ್ಲ ಎಂದು ಕಾರವಾರದಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರೇಣುಕಾಚಾರ್ಯ ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಮಾನಹಾನಿಕರ ಸುದ್ದಿಗಳನ್ನ ಪ್ರಕಟಿಸಬಾರದು ಎಂದು ಕೋರ್ಟ್ ಮೊರೆ ಹೋಗಿರುವ ಬಗ್ಗೆ ಮಾತನಾಡಿದ ಅವರು, ಇದು ಏನನ್ನು ಸೂಚಿಸುತ್ತದೆ. ಇವರು ಯಾವುದೋ ಸ್ಕ್ಯಾಂಡಲ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದೇ ಅರ್ಥ ತಾನೆ. ಅವರು ಯಾವುದೋ ಸೆಕ್ಸ್ ಸ್ಕ್ಯಾಂಡಲ್, ಭ್ರಷ್ಟಾಚಾರ ಅಥವಾ ಬೇರೆ ಯಾವುದೇ ಅಪರಾಧಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ಹೀಗಾಗಿ ಕೋರ್ಟ್ ಮೊರೆ ಹೋಗುತ್ತಿದ್ದಾರೆ ಎಂದರು.
ವಿಡಿಯೋಗಳಲ್ಲಿ ಗ್ರಾಫಿಕ್ಸ್ ಮಾಡುವುದಾದರೆ ರೇಣುಕಾಚಾರ್ಯ, ಸದಾನಂದಗೌಡರದ್ದೇ ಯಾಕೆ ಮಾಡಬೇಕು. ಬೇರೆಯವರನ್ನ ಯಾಕೆ ಮಾಡಲ್ಲ. ಇವರದ್ದು ಕಳ್ಳರ ಮನಸು ಹುಳ್ಳುಳುಗೆ ಎಂಬಂತೆ. ಕಳ್ಳ ಹೆಗಲುಮುಟ್ಟಿ ನೋಡಿಕೊಂಡಂತೆ ಇವರದ್ದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಇನ್ನೂ ಬೊಮ್ಮಾಯಿ ತಮ್ಮವರೇ ಎಂದು ಜೆಡಿಎಸ್ ನವರು ಹೇಳಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಸೇರಿದವರನ್ನೂ ಈಗ ನಮ್ಮವರು, ನಮ್ಮವರು ಎಂದರೆ ಆಗುತ್ತಾ. ನಾನು ಕೂಡ ಜೆಡಿಎಸ್ ನಲ್ಲಿದ್ದವನು, ದೇಶಪಾಂಡೆ ಜನತಾ ದಳದಿಂದ ಬಂದವರು. ಹಾಗಂತ ನಮ್ಮವರು ಅಂದ್ರೆ ಆಗುತ್ತಾ…? ಜೆಡಿಎಸ್ ಈಗ ಸೆಕ್ಯುಲರ್ ಪಾರ್ಟಿ ಅಲ್ಲ. ಜೆಡಿಎಸ್ ಸೆಕ್ಯುಲರಿಸಮ್ ಗೆ ತರ್ಪಣ ಬಿಟ್ಟು ಬಹಳ ದಿನವಾಗಿದೆ. ಹೀಗಾಗಿ ನಾವಿದ್ದ ಪಾರ್ಟಿ ಈಗ ಅಲ್ಲಿಲ್ಲ ಎಂದಿದ್ದಾರೆ.









