ಯಾರು ಸರ್ಕಾರ ನಡೆಸುತ್ತಾರೋ ಅವರೇ ಕೊವಿಡ್ ಬರಲು ಕಾರಣ : ಸಿದ್ದರಾಯಯ್ಯ
ಬೆಂಗಳೂರು : ದೇಶಕ್ಕೆ ಕೋವಿಡ್ ಬರಲು ನಾವು ಕಾರಣನಾ..? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ ಎಂದು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ನಗರದ ಪದ್ಮನಾಭ ನಗರದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಸಾಂಕ್ರಾಮಿಕ ರೋಗವನ್ನು ನಾವು ಕಂಡು ಕೇಳಿರಲಿಲ್ಲ. ಚೀನಾದಿಂದ ನಮ್ಮ ದೇಶಕ್ಕೆ ಬಂದಿದೆ.
ಅದು ನಮ್ಮ ದೇಶಕ್ಕೆ ಬರೋಕೆ ನಾವು ಕಾರಣನಾ..? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ. ಈ ಕ್ಷೇತ್ರದಲ್ಲಿ ಕೋವಿಡ್ ಬರೋಕೆ ಆರ್. ಅಶೋಕ್ ಕಾರಣ.
ಅವರು ಸಿಎಂ ಆಗದೆ ಇರಬಹುದು. ಆದರೆ ಈ ಹಿಂದೆ ಕಂದಾಯ ಸಚಿವರಾಗಿದ್ದರು. ಅಶೋಕ್ ಅವರನ್ನು ಅನೇಕ ಬಾರಿ ಗೆಲ್ಲಿಸಿದ್ದೀರಿ. ಜನರಿಗೆ ಆಹಾರ, ಔಷಧಿ, ಬೆಡ್ ಗಳು ಕೊಡುವುದು ಅಶೋಕ್ ಜವಾಬ್ದಾರಿ ಆದರೆ ಅವರು ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಮುಂದುವರೆದು ಆರ್ ಅಶೋಕ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಇಲ್ಲಿ ಕಾರ್ಯಕ್ರಮ ನಡೆಸಲು ಅಶೋಕ್ ಅನುಮತಿ ಪಡೆಯಬೇಕಂತೆ. ಈ ಮೈದಾನ ಏನೂ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ ಎಂದು ಪ್ರಶ್ನಿಸಿದರು.
ಇದು ಪಬ್ಲಿಕ್ ಪ್ರಾಪರ್ಟಿ. ಅಧಿಕಾರಿಗಳು ಇದಕ್ಕೆ ಮಣೆ ಹಾಕಬಾರದು. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಗಳು ಎಚ್ಚರಿಯಿಂದ ಇರಬೇಕು. ಅಶೋಕ್ ಒಬ್ಬ ಶಾಸಕ ಅಷ್ಟೆ ಎಂದು ಗರಂ ಆದರು.









