ಜಾಗತಿಕ ಶ್ರೇಯಾಂಕದಲ್ಲಿ 2 ನೇ ಸ್ಥಾನಕ್ಕೇರಿದ ಭಾರತದ ‘ಚಿನ್ನದ ಹುಡುಗ’ ..!
ಬೆಂಗಳೂರು : ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ತಂದಿರುವ ಚಿನ್ನದ ಹುಡುಗ ನೀರಜ್ ಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಜೊತೆಗೆ ಬಹುಮಾನಗಳ ಸುರಿಮಳೆಯೂ ನಡೆಯುತ್ತಿದೆ. ಈ ನಡುವೆ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಒಲಂಪಿಕ್ಸ್ ಕ್ರೀಡಾಕೂಟದ ಬಳಿಕ ಜಾಗತಿಕ ಶ್ರೇಣಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಹೌದು.. ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇತ್ತೀಚಿನ ವಿಶ್ವ ಅಥ್ಲೆಟಿಕ್ಸ್ ಶ್ರೇಯಾಂಕದಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್, 1315 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ, ಜರ್ಮನಿಯ ಜೊಹಾನ್ಸ್ ವೆಟರ್ 1396 ಅಂಕಗಳೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕ್ರೀಡಾಕೂಟದ ಬಳಿಕ ನೀರಜ್ ಚೋಪ್ರಾ ಒಂದೇ ಬಾರಿಗೆ 14 ಸ್ಥಾನಗಳ ಸುಧಾರಣೆ ಕಂಡಿದ್ದಾರೆ. ಆ.07 ರಂದು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಚೋಪ್ರಾ ಅವರ ಅನುಯಾಯಿಗಳ ಸಂಖ್ಯೆ 143,000 ರಿಂದ 3.2 ಮಿಲಿಯನ್ ಗೆ ಏರಿಕೆಯಾಗಿದೆ.
ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಎಸೆದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಬಹುಮಾನ ಮೊತ್ತ ಎಷ್ಟು ಗೊತ್ತಾ..?
ಭಾರತದ ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾ ಅವರಿಗೆ ಮೊದಲು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಕ್ಲಾಸ್-1 ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಕೋಟಿ ರೂ. ಬಹುಮಾನ ಘೋಷಿಸಿದೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ 2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.
ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‍ನ ತಂಡ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೂ 1 ಕೋಟಿ ರೂ. ಬಹುಮಾನ ನೀಡುವುದಾಗಿ ಟ್ವೀಟ್ ಮಾಡಿದೆ.
ನೀರಜ್ ಸಾಧನೆಗೆ ಮೆಚ್ಚಿ ವಿಮಾನಯಾನ ಸಂಸ್ಥೆ ಇಂಡಿಗೋ ಭಾರತದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ನೀರಜ್ ಗೆ ಒಂದು ವರ್ಷಗಳ ಕಾಲ ಉಚಿತ ಸೇವೆ ನೀಡುವುದಾಗಿ ತಿಳಿಸಿದೆ.
ಸದಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಭಾರತದ ಜನಪ್ರಿಯ ಕಾರು ತಯಾರಿಕಾ ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್ ಮಹಿಂದ್ರಾ ಅವರು ನೂತನ ಎಕ್ಸ್‍ಯುವಿ 700 ಐಶಾರಾಮಿ ಕಾರನ್ನು ನೀರಜ್‍ಗೆ ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.
ಇನ್ನು ಒಡಿಶಾ ಸರಕಾರ 1 ಕೋಟಿ ರೂ. ಮಣಿಪುರ ಸರಕಾರ ಕೂಡ 1 ಕೋಟಿ ರೂ. ಘೋಷಿಸಿದೆ. ಇತ್ತ ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಜೀವಿತಾವಧಿವರೆಗೆ ದೇಶದ ಯಾವುದೇ ಸ್ಥಳದಿಂದ ನಿಗಮದ ಎಲ್ಲಾ ಬಸ್‍ನಿಂದಲೂ ಉಚಿತವಾಗಿ ಪ್ರಯಾಣಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೇಳಿದೆ. ಇಲ್ಲದೆ ರಿಯಾಲಿಟಿ ಸಂಸ್ಥೆ ಎಲಾನ್ ಗ್ರೂಪ್‍ನ ಮುಖ್ಯಸ್ಥ ರಾಕೇಶ್ ಕಪೂರ್ ಕೂಡ 25 ಲಕ್ಷ ರೂ.ಗಳ ಬಹುಮಾನ ನೀಡಲು ಮುಂದಾಗಿದ್ದಾರೆ.
ಹೀಗೆ ನೀರಜ್ ಅವರಿಗೆ ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದ್ದು, ಈವರೆಗೂ ಅವರಿಗೆ ಒಟ್ಟಾರೆ 12 ಕೋಟಿ 25 ಲಕ್ಷ ರೂ. ಬಹುಮಾನ ಮೊತ್ತ ಹರಿದು ಬಂದಿದೆ ಎಂದು ತಿಳಿದುಬಂದಿದೆ.