ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ಶತಕದ ನೆರವಿನಿಂದಾಗಿ ಭರ್ಜರಿ ಜಯ ಸಾಧಿಸಿದೆ.
ಮೂರನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಸಿಕ್ಸರ್ ಗಳ ಸುರಿಮಳೆಗೈದಿದ್ದಾರೆ. ಈ ಮೂಲಕ ಭಾರತೀಯ ಆಟಗಾರರು ಸಿಕ್ಸರ್ ನಲ್ಲೂ ಸಾಧನೆ ಮಾಡಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಒಟ್ಟು 16 ಸಿಕ್ಸ್ ಬಾರಿಸಿದ್ದ ಭಾರತೀಯ ಬ್ಯಾಟರ್ಗಳು ಮೂರನೇ ಪಂದ್ಯದಲ್ಲಿ 13 ಸಿಕ್ಸರ್ ಸಿಡಿಸಿದ್ದಾರೆ. ಈ ಸಿಕ್ಸರ್ ಗಳೊಂದಿಗೆ 2024 ರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಭಾರತದ ಹೆಸರಿಗೆ ಬಂದಿದೆ.
ಈ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿತ್ತು. 2024ರಲ್ಲಿ 21 ಟಿ20 ಪಂದ್ಯಗಳನ್ನಾಡಿರುವ ವಿಂಡೀಸ್ ಒಟ್ಟು 201 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗಿದ್ದಾರೆ.
2024ರಲ್ಲಿ ಇಲ್ಲಿಯವರೆಗೆ 25 ಟಿ20 ಪಂದ್ಯಗಳನ್ನಾಡಿರುವ ಭಾರತ, ಒಟ್ಟು 214 ಸಿಕ್ಸರ್ ಗಳನ್ನು ಸಿಡಿಸಿದೆ. ಈ ಮೂಲಕ ಅತ್ಯಧಿಕ ಸಿಕ್ಸರ್ ಸಿಡಿಸಿದ ತಂಡವಾಗಿ ಹೊರಹೊಮ್ಮಿದೆ.
ಅಲ್ಲದೇ, ಭಾರತ ಹಾಗೂ ವೆಸ್ಟ್ ಇಂಡೀಸ್ ಅನ್ನು ಹೊರತುಪಡಿಸಿ ಈ ವರ್ಷ ಬೇರೆ ಯಾವುದೇ ತಂಡ ಟಿ20 ಕ್ರಿಕೆಟ್ನಲ್ಲಿ 200ಕ್ಕೂ ಅಧಿಕ ಸಿಕ್ಸರ್ ಸಿಡಿಸಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಿಲಕ್ ವರ್ಮಾ 7 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.








