ಜಮ್ಮು-ಕಾಶ್ಮೀರ, ಮೇ 29 : ಕೊರೋನಾ ಸೋಂಕು ಹರಡದಂತೆ ಬೇರೆ ರಾಜ್ಯದಿಂದ ಅಥವಾ ಬೇರೆ ದೇಶದಿಂದ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್ ಗೆ ಒಳಪಡಿಸುವುದು ಇಂದಿನ ಪರಿಸ್ಥಿತಿಯಲ್ಲಿ ಸರ್ವಸಾಮಾನ್ಯ. ಆದರೆ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಕುದುರೆಯೊಂದನ್ನು 14 ದಿನಗಳ ಅವಧಿಗೆ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅಷ್ಟೇ ಅಲ್ಲ ಕುದುರೆಯ ಮಾಲೀಕನಿಗೆ ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಈ ಕುದುರೆ ರೆಡ್ ಝೋನ್ ಪ್ರದೇಶಗಳಲ್ಲಿ ಓಡಾಡಿದ ಹಿನ್ನಲೆಯಲ್ಲಿ ಕುದುರೆಗೆ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದು, ಮುಂದಿನ 14 ದಿನಗಳ ಕಾಲ ಕುದುರೆ ಸವಾರಿ ಮಾಡುವುದಾಗಲಿ, ಕುದುರೆಯ ಸಮೀಪ ಹೋಗುವುದಾಗಲಿ ಮಾಡಬಾರದು ಎಂದು ಸೂಚಿಸಿದ್ದಾರೆ.
ಕಾಶ್ಮೀರದಿಂದ ರಾಜೌರಿ ಜಿಲ್ಲೆಗೆ ಕುದುರೆ ಜೊತೆ ತೆರಳಿದ್ದ ವ್ಯಕ್ತಿ ಹಿಂದಿರುಗುವಾಗ ಅವನನ್ನು ಅಧಿಕಾರಿಗಳು ಮೊಘಲ್ ರಸ್ತೆಯಲ್ಲಿ ತಡೆದು ನಿಲ್ಲಿಸಿ ಸ್ಕ್ರೀನಿಂಗ್ ಮಾಡಿದ್ದಾರೆ. ಕುದುರೆಗೆ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಅಧಿಕಾರಿಗಳು ಅದನ್ನು 14 ದಿನಗಳ ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ. ವ್ಯಕ್ತಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಕುದುರೆಯ ಮಾಲೀಕನಿಗೆ ಕುದುರೆ ಸವಾರಿ ಮಾಡದಂತೆ, ಅದರ ಬಳಿ ಹೋಗದಂತೆ ಸೂಚನೆ ನೀಡಿದ್ದು, ಕುದುರೆಯನ್ನು 14 ದಿನಗಳ ಕ್ವಾರಂಟೈನ್ ನಲ್ಲಿ ಇಟ್ಟು ಮುಂಜಾಗ್ರತೆ ವಹಿಸುವಂತೆ ತಿಳಿಸಿರುವುದಾಗಿ ವರದಿಗಳು ಹೇಳಿವೆ.








