ತುಮಕೂರು: ನೀರಿನ ತ್ಯಾಜ್ಯದ ಗುಂಡಿಯಲ್ಲಿ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ತೆಂಗಿನಕಾಯಿ ಫ್ಯಾಕ್ಟರಿಯಲ್ಲಿ (Coconut Factory) ತೆಂಗಿನಕಾಯಿಯ ನೀರಿನ ತ್ಯಾಜ್ಯ ಸಂಗ್ರಹವಾಗುವ ಗುಂಡಿಯಲ್ಲಿ ಬಿದ್ದ ಪರಿಣಾಮ ಮಗು ಸಾವನ್ನಪ್ಪಿದೆ. ಈ ಘಟನೆ ಜಿಲ್ಲೆಯ (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ಮೀಸೆತಿಮ್ಮನಹಳ್ಳಿ ಹತ್ತಿರ ಇರುವ ಮಾನ್ಯಶ್ರೀ ಕೋಕನೆಟ್ ಫ್ಯಾಕ್ಟರಿಯಲ್ಲಿ ನಡೆದಿದೆ.
ಕಾರ್ಮಿಕರ ಎರಡು ವರ್ಷದ ಹೆಣ್ಣು ಮಗು ಬಿದ್ದು ಸಾವನ್ನಪ್ಪಿದೆ ಬಿಹಾರ ಮೂಲದ ತಂದೆ ಹರೀಂದ್ರಕುಮಾರ್ ಮತ್ತು ತಾಯಿ ರೀನಾದೇವಿ ಪುತ್ರಿ ಕುಸುಮ ಕುಮಾರಿ (2) ಸಾವನ್ನಪ್ಪಿರುವ ದುರ್ದೈವಿ ಎನ್ನಲಾಗಿದೆ.
ಆಟವಾಡುತ್ತಿದ್ದ ಮಗು ಕಾಣದಿದ್ದಾಗ ಹುಟುಕಾಟ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದೆ.
ತೆಂಗಿನಕಾಯಿ ಪೌಡರ್ ಮಾಡುವ ಮೊದಲು ಸುಲಿದ ತೆಂಗಿನಕಾಯಿ ತೊಳೆದ ನೀರು, ಕಾಯಿಯೊಳಗಿನ ನೀರು ತ್ಯಾಜ್ಯದ ರೂಪದಲ್ಲಿ ಈ ಗುಂಡಿಯಲ್ಲಿ ಸಂಗ್ರಹವಾಗುತ್ತದೆ. ಅದೇ ಗುಂಡಿಯಲ್ಲಿ ಮಗು ಬಿದ್ದು ಸಾವನ್ನಪ್ಪಿದೆ. ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.