ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಿಡ್ನಾಪ್ ಆಗಿದ್ದ ಎರಡು ವರ್ಷದ ಮಗುವನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಕಿಡ್ನಾಪರ್ಸ್ ಪರಾರಿಯಾಗಿದ್ದಾರೆ.
ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದ ಅಮ್ಮಜಾನ್ ಬಾವಜಾನ್ ದರ್ಗಾದಲ್ಲಿ ಗಂಡು ಮಗುವನ್ನು ಕಿಡ್ನಾಪ್ ಮಾಡಲಾಗಿತ್ತು. ಆನಂತರ ಮಗು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಕಿಡ್ನಾಪರ್ಸ್ ಮಗುವನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಮೂಲದ ಜಬೀವುಲ್ಲಾ ಹಾಗೂ ಸುಮೈಯಾ ದಂಪತಿಯ ಮಗು ಜಾವೀದ್ ಕುಟುಂಬಸ್ಥರೊಂದಿಗೆ ಮುರುಗಮಲ್ಲ ದರ್ಗಾಕ್ಕೆ ಹೋಗಿದ್ದ ಸಂದರ್ಭದಲ್ಲಿ ಜನಸಂದಣಿ ನಡುವೆ ದುಷ್ಕರ್ಮಿಗಳು ಮಗುವನ್ನು ಅಪಹರಿಸಿದ್ದರು. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು. ಈಗ ಮಗು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಸಂತಸಗೊಂಡಿದ್ದಾರೆ.