ದಾವಣಗೆರೆ: ಹಸುವೊಂದು ಚಿರತೆ ದಾಳಿ (Leopard Attack) ಯಿಂದ ತನ್ನ ಮಾಲೀಕನನ್ನು ಕಾಪಾಡಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಜಿಲ್ಲೆಯ ಚನ್ನಗಿರಿಯಲ್ಲಿ ಕೊಡಕಿನಕೆರೆ ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ಕೊಂಬಿನಿಂದ ತಿವಿದು ಯಜಮಾನನ್ನು ಉಳಿಸಿದೆ. ಹೀಗಾಗಿ ಮನೆಯವರು ಹಸು ಗೌರಿಗೆ ನಮಸ್ಕರಿಸಿ ಪ್ರೀತಿ ತೋರಿಸುತ್ತಿದ್ದಾರೆ. ಚಿರತೆಯ ದಾಳಿಯಿಂದಾಗಿ ಕೊಡಕಿನಕೆರೆ ಹಾಗೂ ಸುತ್ತಮುತ್ತ ಗ್ರಾಮದವರಲ್ಲಿ ಆತಂಕ ಹೆಚ್ಚಾಗುತ್ತಿದೆ.
ಕೊಡಕಿನಕೆರೆ ಗ್ರಾಮದ ಕರಿಹಾಲಪ್ಪ ಅವರು ತೋಟದಲ್ಲಿ ಹಸು ಮೇಯಿಸಲು ತೆರಳಿದ್ದರು. ಈ ವೇಳೆ ಕರಿಹಾಲಪ್ಪ ಅವರ ಮೇಲೆ ಚಿರತೆ ಏಕಾಏಕಿಯಾಗಿ ದಾಳಿ ನಡೆಸಿದೆ. ಕೂಡಲೇ ಹಸು ಗೌರಿ, ಚಿರತೆ ಮೇಲೆ ದಾಳಿ ನಡೆಸಿ ತಲೆಯಿಂದ ಗುದ್ದಿ ದೂರಕ್ಕೆ ಸರಿಸಿದೆ. ಹಸುವಿನ ಏಟು ತಿಂದರೂ ಸುಮ್ಮನಾಗದ ಚಿರತೆ ಮತ್ತೆ ದಾಳಿಗೆ ಮುಂದಾಗಿದೆ.
ಎರಡನೇ ಬಾರಿ ದಾಳಿ ನಡೆಸಲು ಮುಂದಾದಾಗ ಕರಿಹಾಲಪ್ಪ ಅವರು ಕೈಯಲ್ಲಿರುವ ದೊಣ್ಣೆ ಹಿಡಿದು ಬೆದರಿಸಿದ್ದಾರೆ. ಇದರಿಂದ ಬೆದರಿದ ಚಿರತೆ ಕಾಡಿನೊಳಗೆ ಓಡಿದೆ ಎನ್ನಲಾಗಿದೆ.