ಶಿವಮೊಗ್ಗ: ಒಂದು ಮಹಾಮಾರಿ ಕೊರೊನಾ, ಇನ್ನೊಂದೆಡೆ ಲಾಕ್‍ಡೌನ್. ಇವರೆಡರಿಂದ ರಾಜ್ಯದ ಮಲೆನಾಡಿನ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.
ಇದರ ನಡುವೆಯೇ, ಶಿವಮೊಗ್ಗದ ಬ್ಯಾಂಕ್‍ವೊಂದರ ಸಿಬ್ಬಂದಿ ಕೇವಲ ಮೂರೂವರೆ ರೂ. ಸಾಲ ಕಟ್ಟಿಸಿಕೊಳ್ಳಲು ರೈತನನ್ನು 15 ಕಿ.ಮೀ ದೂರದಿಂದ ನಡೆದುಕೊಂಡು ಬರುವಂತೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬರುವೆ ಗ್ರಾಮದ ರೈತ ಲಕ್ಷ್ಮಿ ನಾರಾಯಾಣ, ನಿಟ್ಟೂರು ಕೆನರಾ ಬ್ಯಾಂಕ್ ಸಿಬ್ಬಂದಿ ಮಾಡಿ ಯಡವಟ್ಟಿಗೆ 30 ಕಿ.ಮೀ ಕಾಲ್ನಡಿಗೆಯಲ್ಲೇ ನಡೆದುಕೊಂಡು ಹೋಗಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಆಗಿದ್ದು ಇಷ್ಟು..!
ರೈತ ಲಕ್ಷ್ಮಿ ನಾರಾಯಾಣ, ನಿಟ್ಟೂರಿನ ಕೆನರಾ ಬ್ಯಾಂಕ್‍ನಲ್ಲಿ 35 ಸಾವಿರ ರೂ. ಬೆಳೆ ಸಾಲ ಪಡೆದಿದ್ದ. ಇದರಲ್ಲಿ 32 ಸಾವಿರ ರೂ. ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿತ್ತು. ಉಳಿದ 3 ಸಾವಿರ ಹಣವನ್ನು ಇತ್ತೀಚೆಗೆ ಬ್ಯಾಂಕ್‍ಗೆ ಹೋಗಿ ಕಟ್ಟಿ ಕ್ಲಿಯರ್ ಮಾಡಿಕೊಂಡಿದ್ದ.
ಆದರೆ, ಇತ್ತೀಚೆಗೆ ರೈತ ಲಕ್ಷ್ಮಿ ನಾರಾಯಣನಿಗೆ ಕರೆ ಮಾಡಿದ ಬ್ಯಾಂಕ್ ಸಿಬ್ಬಂದಿ, ನೀವು ಸಾಲದ ಹಣ ಬಾಕಿ ಉಳಿಸಿಕೊಂಡಿದ್ದೀರಿ. ತಕ್ಷಣ ಬ್ಯಾಂಕಿಗೆ ಬಂದು ಸಾಲ ಕಟ್ಟುವಂತೆ ತಿಳಿಸಿದ್ದರು.
ಇದರಿಂದ ಗಾಬರಿಗೊಂಡ ರೈತ, ನಿಟ್ಟೂರಿಗೆ ತೆರಳಲು ಸ್ವಂತ ಬೈಕ್ ಇಲ್ಲದ ಕಾರಣ ನಡೆದುಕೊಂಡೇ ಹೋಗಿದ್ದರು.
ಏನೋ ಯಡವಟ್ಟು ಆಗಿದೆ ಎಂದು ಗಾಬರಿಯಿಂದ ಹೋದ ರೈತನಿಗೆ ಅಲ್ಲಿ ಶಾಕ್ ಕಾದಿತ್ತು.
ಎಷ್ಟು ಹಣ ಸಾಲ ಬಾಕಿ ಇದೆ, ಕಟ್ಟುತ್ತೇನೆ ತಿಳಿಸಿ ಎಂದು ಬ್ಯಾಂಕ್ ಸಿಬ್ಬಂದಿ ವಿಚಾರಿಸಿದಾಗ ಕೇವಲ 3.40 ರೂ. ಎಂಬುದು ಗೊತ್ತಾಗಿದೆ.
ಕೇವಲ 3.40 ರೂ. ಕಟ್ಟಿಸಿಕೊಳ್ಳಲು ಲಾಕ್‍ಡೌನ್ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ರೈತನನ್ನು ಅಷ್ಟು ದೂರದಿಂದ ಕರೆಸಿಕೊಳ್ಳಬೇಕಿತ್ತೇ. ಬ್ಯಾಂಕ್ ಸಿಬ್ಬಂದಿಗೆ ಮಾನವೀಯತೆಯೇ ಇಲ್ಲವೇ ಎಂದು ಸಾರ್ವಜನಿಕರು ಆಕ್ರೋಶದಿಂದ ಕೇಳುವಂತಾಗಿದೆ.