ಮಂಡ್ಯ: ಆಕಸ್ಮಿಕವಾಗಿ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ನಡೆದಿದೆ.
ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿ ರೈತರೊಬ್ಬರ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ತೋಟದಲ್ಲಿ ಕಷ್ಟ ಪಟ್ಟು ಬೆಳೆಸಿದ್ದ ತೆಂಗು, ಅಡಕೆ ಮರಗಳು, ಪೈಪ್ಗಳು ಸೇರಿದಂತೆ ಇನ್ನಿತರ ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ.
ಗ್ರಾಮದ ರಾಮಣ್ಣ ಎಂಬುವವರಿಗೆ ಸೇರಿದ್ದ ತೋಟಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಈ ಘಟನೆ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.