ಹುಟ್ಟು ಸಾವಿನ ನಡುವೆ ನಾಲ್ಕು ದಿನದ ಬದುಕು
✍ಪ್ರಶಾಂತ್ ಮುದ್ರಾಡಿ.
ಹುಟ್ಟು ಆಕಸ್ಮಿಕ ಸಾವು ಖಚಿತ.. ಜೀವನ ಅನ್ನೋದು ನೀರ ಮೇಲಿನ ಗುಳ್ಳೆ ಅಷ್ಟೇ ಅಂತ ಹಿರಿಯ ದಾರ್ಶನಿಕರ ಮಾತು ಖಂಡಿತಾ ಸತ್ಯ ಅಂತ ಮನುಷ್ಯನಿಗೆ ಹರೆಯ ಏರಿದಂತೆ ಅರಿವಾಗ್ತದೆ. ಕೆಲವು ಸಾವಿಗೆ ನ್ಯಾಯ ಇದ್ದರೆ ಹೆಚ್ಚಿನ ಸಾವಿನ ಸಂದರ್ಭದಲ್ಲಿ ಸಾವಿನ ಕಾರಣಕರ್ತ ದೇವರು ವಿಲ್ಲನ್ ಆಗಿ ಕಂಡುಬರ್ತಾನೆ! ಲಾಡೆನ್, ವೀರಪ್ಪನ್, ಮುಸೊಲೋನಿ, ಹಿಟ್ಲರ್ ಸಾವಿಗೆ ಜನತೆ ಖುಷಿ ಪಟ್ಟಿದ್ದರೆ, ರಾವಣ ಮತ್ತು ಕರ್ಣನ ಸಾವಿಗೆ ಖುಷಿ ಪಟ್ಟವರಿಗಿಂತ ಮರುಕ ಪಟ್ಟವರೇ ಜಾಸ್ತಿ ಇದ್ದರಂತೆ!
ಯಾರೂ ಇಷ್ಟಪಡದ, ಮಾತಾಡಲೂ ಬಯಸದ ವಿಷಯ—ಸಾವು. ಆದರೆ ಇಂದಿಲ್ಲ ನಾಳೆ ನಾವೆಲ್ಲ ಅದನ್ನು ಎದುರಿಸಲೇಬೇಕು. ಕೈ ಬೆರಳು ಮನೆ ದ್ವಾರದ ಎರಡು ಬಾಗಿಲಿನ ನಡುವೆ ಸಿಕ್ಕಿ ಹಾಕಿ ಕೊಂಡಕ್ಷಣ ಆಗುವ ನೋವು ತಾತ್ಕಾಲಿಕ ಆದ್ರೆ ಒಬ್ಬ ಮನುಷ್ಯನ ಸಾವು ತುಂಬ ಅಜೀವ ನೋವು ತರುತ್ತದೆ. ಹೆತ್ತವರಾಗಲಿ, ಬಾಳ ಸಂಗಾತಿಯಾಗಲಿ, ಮಗುವಾಗಲಿ ಅಥವಾ ಮನೆಯಲ್ಲಿ ಸಾಕಿದ ಪ್ರಾಣಿ,ಪಕ್ಷಿಗಳಾಗಲಿ ಸಾವಿನಿಂದ ನಮ್ಮನ್ನು ಅಗಲಿದಾಗ ಅದನ್ನು ಒಪ್ಪಿಕೊಳ್ಳುವುದು ಸುಲಭದ ವಿಷಯವಲ್ಲ. ಸಾವು ದಿಢೀರನೆ ಬಂದೆರಗಬಹುದು ಅಥವಾ ವಿಷದಂತೆ ನಿಧಾನವಾಗಿ ಆವರಿಸಬಹುದು. ವಿಷಯ ಏನೇ ಇರಲಿ, ಅದು ಕೊಡುವ ನೋವಿನಿಂದ ತಪ್ಪಿಸಿಕೊಳ್ಳಲಿಕ್ಕಾಗಲಿ ಅದರ ಹಿಡಿತದಿಂದ ಬಿಡಿಸಿಕೊಳ್ಳಲಿಕ್ಕಾಗಲಿ ಆಗುವುದಿಲ್ಲ. ಭಗವಂತನ ಸುಂದರ ರುದ್ರ ರಮಣೀಯ ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು?ಬ್ರಹ್ಮ ಸೃಷ್ಟಿಕರ್ತನಾದರೆ ಶಿವ ಲಯಕರ್ತ. ಹಗಲು-ರಾತ್ರಿ, ಹುಟ್ಟು-ಸಾವುಗಳ ಸರಣಿಯನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ತರ ತರಹದ ಹೂವು ಅರಳಿಸಿ,ಕಾಮನಬಿಲ್ಲು ಮೂಡಿಸಿ, ಮನುಷ್ಯನಲ್ಲಿ ಆಸೆಯಿಂದ ಹಿಡಿದು ದುರಾಸೆಯನ್ನು ಮೂಡಿಸಿ,ಏಕತಾನತೆಯಲ್ಲೂ ವೈವಿಧ್ಯತೆಯನ್ನು ಸೃಷ್ಟಿಸುವ ಪ್ರಕೃತಿ ಮಾತೆ ತನ್ನ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ತುಂಬಿಯೇ ಜೀವ ಸ್ಪರ್ಶ ಕೊಡುತ್ತಾಳೆ. ಇದನ್ನು ವೈಜ್ಞಾನಿಕ ದೃಷ್ಟಿಯಿಂದ ಹೇಳುವುದಾದರೆ, ಸೂರ್ಯನಿಂದ ಸಿಡಿದು ಹೋದ ತುಂಡು ಭೂಮಿಯಾಯ್ತು. ಈ ಭೂಮಿಯ ಸಂಪನ್ಮೂಲಗಳಿಂದ ಜೀವ ತಳೆದದ್ದು ಎಲ್ಲಾ ಭೂವಾಸಿಗಳು – ಏಕ ಕೋಶ ಜೀವಿಯಾದ ಅಮೀಬದಿಂದ ಸಂಕೀರ್ಣ ದೇಹ ಹೊಂದಿರುವ ಮನುಜನವರೆಗೆ. ಹಾಗಾಗಿ ಸೃಷ್ಟಿಯ ಪ್ರಕ್ರಿಯೆಯನ್ನು ಈ ಜೀವಿಗಳು ಪ್ರಕೃತಿಯ ಜೊತೆಗೆ ಮುಂದುವರೆಸುಕೊಂಡು ಹೋಗಲು ಸಾಧ್ಯವಾಯ್ತು.ಎರಡು ಅಣುಗಳ ಸಮ್ಮಿಲನದಿಂದ ಕುಡಿದ ಒಂದು ಅಂಶ ಬ್ರೂಣವಾಗಿ ನಂತರ ಒಂದು ಲಿಂಗವಾಗಿ ತರುವಾಯ ಮಗುವಿನ ರೂಪ ತಾಳಿ ನಂತರ ಯುವಕ ಅಥವಾ ಯುವತಿಯಾಗಿ ನಂತರ ಮಧ್ಯ ವಯಸ್ಸಿಗೆ ಸೇರ್ಪಡೆಗೊಂಡು ಕೊನೆಗೆ ತನ್ನ ಕೊನೆಯ ಉಸಿರನ್ನು ಬಿಡುವುದೇ ಜೀವನ.

ಒಂದೊಮ್ಮೆ ಈ ಪ್ರಕ್ರಿಯೆಯನ್ನು ಆಳವಾಗಿ ಗಮನಿಸಿದರೆ ಮಗು ಹುಟ್ಟುವಾಗ ತೊದಲು ಮಾತನ್ನಾಡಿ,ಸಣ್ಣ ದುಂಡಗಿನ ಸ್ಟಾಂಡ್ ಮೂಲಕ ನಡೆಯಲು ಕಲಿತು,ಸಹಾಯಕ್ಕೆ ಅಮ್ಮ ಅಥವಾ ಇತರರ ನೆರವು,ಅರ್ಥವಿಲ್ಲದ ಮಾತನ್ನಾಡಿ ಬುದ್ದಿ ಬರುವ ಹರೆಯಕ್ಕೆ ಇಳಿಯುತ್ತದೆ. ಇದೇ ಮಗು ತನ್ನ 80ರ ಹರೆಯದ ನಂತರ ತನ್ನ ಹಳೆಯ ಸ್ಥಿತಿಗೆ ಬರುವುದೇ ಸೃಷ್ಟಿಯ ವೈಚಿತ್ರ! 80ರ ನಂತರ ಧ್ವನಿ ತೊದಲು ಆಗುತ್ತದೆ,ಮಾತಿನ ಮೇಲೆ ಹಿಡಿತ ಇರೋದಿಲ್ಲ, ನಡೆಯಲು ಆಗದೆ ಸ್ಟಾಂಡ್ ಅವಲಂಬನೆ ಬೇಕಾಗುತ್ತದೆ. ನಡೆಯಲು ಪರರ ನೆರವು ಅವಲಂಬನೆ ಬೇಕಾಗುತ್ತದೆ.
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ಮೇಯಿತು
ಕೊಂದಹೆನೆಂಬುದ ಅರಿಯದೆ
ಬೆಂದ ಒಡಲ ಹೊರವುತ್ತಲ್ಲದೆ
ಅಂದಂದೇ ಹುಟ್ಟಿತು ಅಂದಂದೇ ಹೊಂದಿತು
ಕೊಂದವರು ಅವರೇ ಕೂಡಲಸಂಗಮ ದೇವಾ
ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೊಣಕ್ಕೆ ಆಸೆ ಮಾಡುವಂತೆ
ಶೂಲನೇರುವ ಕಳ್ಳನು ಹಾಲುತುಪ್ಪವ ಕುಡಿದು
ಮೇಲೇಸು ಕಾಲಾವ ಬದುಕನೇನು?ಕೆಡುವವೊಡಲನಚ್ಚಿ ಕಡು ಹುಸಿಯನೆ ನುಡಿದು ಒಡಲ ಹೊರೆವರ ಕೂಡಲ ಸಂಗಮ ದೇವಯ್ಯನೊಲ್ಲ ಕಾಣಿರಣ್ಣ..

ಬಲಿಕೊಡಲೆಂದು ತಂದ ಕುರಿಯು ತನಗೆ ಮುಂದೆ ಸಾವಿದೆ ಎಂದರಿಯದೆ ಬಾಗಿಲಿಗೆ ಕಟ್ಟಿದ ತೋರಣದ ಹಸಿರೆಲೆಗಳನ್ನು ತಿನ್ನುತ್ತಿರುವುದು. ತನ್ನೆದುರಲ್ಲಿ ತನ್ನ ಕೊರಳನ್ನು ಕತ್ತರಿಸಲು ಕತ್ತಿಮಸೆಯುತ್ತಿರುವರು ಎಂಬ ಅರಿವು ಅದಕ್ಕಿಲ್ಲ. ಈ ಮಾನವನಾದರೂ ಬಲಿ ಕುರಿಯಂತೆ, ಸಾವು ಈಗಲೋ ಆಗಲೋ ಬರಲು ಸಿದ್ಧವಾಗಿದ್ದರೂ, ಸುಖಕ್ಕೆ ಬಲಿಗಳಂತಹ ಹೀನ ಕಾರ್ಯಗಳನ್ನೆಸಗುತ್ತಿರುವನು. ಸಾವು ನಮ್ಮ ಬೆನ್ನ ಹಿಂದೆ ಇದೆ ಎಂದು ಹಿರಿಯರು ಹೇಳುತ್ತಿರುತ್ತಾರೆ ಆದರೆ ನಾವು ಅದನ್ನು ಎಲ್ಲಿ ಇದೆ? ಎಂದು ಪ್ರಶ್ನೆ ಮಾಡುತ್ತೇವೆ.
ಆದ್ರೆ ಈ ವಚನ ಓದಿದ ಮೇಲೆ ನಿಜ ಅನಿಸುತ್ತದೆ ಆದ್ರೆ ನಮಗೆ ಸಾವು ಖಚಿತ ಎಂದರೂ ಸಮಯ ತಿಳಿದಿರುವುದಿಲ್ಲ ಆದ್ದರಿಂದ ನಾವು (ಮನುಷ್ಯರು)ಇಷ್ಟೊಂದು ಮೆರೆಯುತ್ತಿದ್ದೇವೆ ಅನಿಸುತ್ತದೆ ಅಷ್ಟೇ! ಜೀವನ ಇಷ್ಟೇ ಅಂತ ತಿಳಿದಿದ್ದು ತನ್ನ ಮಗ ಅಫಘಾತಕ್ಕೆ ಈಡಾಗಿ ತನ್ನ ತಂದೆಯ ಕಾಲಲ್ಲಿ ಮಲಗಿ ತಂದೆ ಕಣ್ಣೀರು ತುಂಬಿದ ಕಣ್ಣಲ್ಲಿ ಮಗನನ್ನು ಒಮ್ಮೆ ಆಸ್ಪತ್ರೆಗೆ ಸೇರಿಸಿ ಅಂದಾಕ್ಷಣ,ಮೂರು ಜೀವಗಳು ಚಿತೆಗೇರಿ ತಮ್ಮ ಬದುಕಿನ ಪುಟದಲ್ಲಿ ಪೂರ್ಣ ವಿರಾಮ ಹಾಕದೆ ಅರ್ಧ ವಿರಾಮ ಹಾಕಿದ ಕ್ಷಣದಲ್ಲಿ,ತನ್ನ ರಾಜಕೀಯ ಜೀವನದಲ್ಲಿ ಒಂದೇ ಕಪ್ಪು ಕಲೆ ಮೂಡದಂತೆ ಅಪ್ಪಟ ಚಿನ್ನವಾಗಿ ಜನರ ಮನಸ್ಸಿನ ಮನದೊಡೆಯನಾಗಿ ಕೊನೆಗೊಂಡ ನೆನಪಲ್ಲಿ,ಕನಸುಗಳಲ್ಲೇ ಜೀವನವನ್ನು ಅಮರವಾಗಿಸಿದ ತನ್ನ ಹೆಸರನ್ನು ನೆನಪಿನ ಪುಟದಲ್ಲಿ ಶಾಶ್ವವತನ್ನಾಗಿಸಿದ ಕನಸುಗಳ ಸರದಾರ ಗೆಳೆಯನ ನೆನಪಿನಲ್ಲಿ..
Goal of Life is Death ಎನ್ನುವ ಮಾತಿಗೆ ಸಂಪೂರ್ಣ ಒಪ್ಪಿಗೆ ಇಲ್ಲದಿದ್ದರೂ ಒಪ್ಪುವಂತೆ ಸನ್ನಿವೇಶ ಮೂಡಿಸಿದ ದೇವರೇ ಸೃಷ್ಟಿಕರ್ತ ಅವನೇ ಲಯಕರ್ತ ಅವನೇ ಬ್ರಹ್ಮ ಅವನೇ ಯಮಧರ್ಮ!








