ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಆದರೆ, ಮತದಾರರ ಸೆಳಯುವುದಕ್ಕೆ ಹಣ, ವಸ್ತುಗಳನ್ನು ಹಂಚುವುದು ಕೂಡ ಎಗ್ಗಿಲ್ಲದೆ ಸಾಗಿತ್ತಿದೆ. ಈ ಮಧ್ಯೆ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.
ಬೆಂಗಳೂರಿನ ಎರಡು ಪ್ರತ್ಯೇಕ ಕಡೆಗಳಲ್ಲಿ ಲಕ್ಷಾಂತರ ರೂ. ಹಣ ಮತ್ತು ನೂರಾರು ಕುಕ್ಕರ್ ವಶಕ್ಕೆ ಪಡೆದಿದ್ದಾರೆ. ಆನೇಕಲ್ ತಾಲೂಕಿನ ಜಿಗಣಿ ಬನ್ನೇರುಘಟ್ಟ ಮುಖ್ಯ ರಸ್ತೆಯ ಕೊಪ್ಪ ಚೆಕ್ ಪೋಸ್ಟ್ ಹತ್ತಿರ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5.20 ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚುನಾವಣೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಕುಕ್ಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ನೆಲಮಂಗಲದ ಜಾಸ್ ಟೋಲ್ ಚೆಕ್‌ಪೋಸ್ಟ್‌ನಲ್ಲಿ 302 ಕುಕ್ಕರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ವಸ್ತುಗಳನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಕ್ಯಾಂಟರ್ ವಾಹನ ಮೂಲಕ ಸಾಗಿಸಲಾಗುತ್ತಿತ್ತು. ಚಾಲಕ ಈರಣ್ಣ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚರಣೆ ನಡೆಸುತ್ತಿದ್ದಾರೆ.