12 ಮದುವೆಯಾಗಿದ್ದ ವ್ಯಕ್ತಿಯೊಬ್ಬ ತನ್ನ 12ನೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ನ ಜಾಮ್ದಾರ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಈ ವ್ಯಕ್ತಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಸಾವಿತ್ರಿ ದೇವಿ (40) ಸಾವನ್ನಪ್ಪಿದ ಮಹಿಳೆ.ಸೋಮವಾರ ರಾತ್ರಿ ವೇಳೆ ಪತಿ ಮದ್ಯ ಸೇವಿಸಿ ಬಂದು, ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಮಾತು ಮಾತಿಗೆ ಬೆಳೆದು ಜಗಳ ತಾರಕಕ್ಕೆ ಹೋಗುತ್ತಿದ್ದಂತೆ ರಾಮಚಂದ್ರ ದೊಣ್ಣೆಯಿಂದ ಪತ್ನಿಗೆ ಹೊಡೆದಿದ್ದಾನೆ. ಹೀಗಾಗಿ ಪತ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಈ ಭೂಪ 12 ಮದುವೆ ಆಗಿದ್ದಾನೆ ಎನ್ನಲಾಗಿದೆ. ಈ ಹಿಂದೆ ಇದ್ದ ಪತ್ನಿಯರು ಆರೋಪಿಯ ಕಾಟ ತಾಳಲಾರದೇ ಓಡಿ ಹೋಗಿದ್ದಾರೆ. ಸಾವಿತ್ರಿ ದೇವಿ ರಾಮಚಂದ್ರನ 12ನೇ ಪತ್ನಿ. ರಾಮಚಂದ್ರ ತನ್ನ ಹಿಂದಿನ ಹೆಂಡತಿಯರಿಂದ ಒಂದೇ ಒಂದು ಮಗು ಕೂಡ ಪಡೆದಿರಲಿಲ್ಲ. 12ನೇ ಪತ್ನಿಯಾಗಿದ್ದ ಸಾವಿತ್ರಿಗೆ ಮೂರು ಗಂಡು ಮತ್ತು ಒಂದು ಹೆಣ್ಣು ಮಗು ಇತ್ತು. ಈ ಘಟನೆಯ ಕುರಿತು ಗವಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.








