ತನ್ನ ಬಾಲ ಭಾಷೆಯಲ್ಲಿ ಮಾನವೀಯತೆಯ ದೊಡ್ಡ ಪಾಠ ಹೇಳಿದ ಮಿಜೋರಾಂನ ಆರರ ಪೋರ
ಮಿಜೋರಾಂನ ಒಬ್ಬ ಪುಟ್ಟ ಹುಡುಗ ಮನವೀಯತೆಯಿಂದ ಜನರ ಮನಗೆದ್ದಿದ್ದಾನೆ. ಮಾನವೀಯತೆಯಿಂದಾಗಿಯೇ ಎಲ್ಲರ ಮನೆಮಾತಾಗಿರುವ ಈ ಹುಡುಗನ ಸ್ಟೋರಿ ಇಲ್ಲಿದೆ ನೋಡಿ. ಅವನ ಹೆಸರು ಡೆರೆಕ್ ಲಚ್ಚನ್ ಹಿಮಾ.. ಈ ಪೋರನ ವಯಸ್ಸು ಕೇವಲ ಆರೇ ವರ್ಷ. ಈತ ಸಾಯಿರಂಗ್ ನವನು. ಈತ ಈಗ ಸುದ್ದಿಯಲ್ಲಿರೋದು ಒಂದು ಕೋಳಿಯ ವಿಚಾರಕ್ಕೆ. ಈತ ಒಂದು ಕೈಯಲ್ಲಿ ಕೋಳಿಯನ್ನೂ ಇನ್ನೊಂದು ಕೈಯಲ್ಲಿ ಹತ್ತುರೂಪಾಯಿಗಳನ್ನು ಹಿಡಿದುಕೊಂಡಿರುವ ಫೋಟೋ ಈಗ ವೈರಲ್ ಆಗಿದೆ. ಇದೊಂದೇ ಪೋಸ್ಟ್ ಗೆ ಒಂದು ಲಕ್ಷ ಪ್ರತಿಕ್ರಿಯೆಗಳು ಹಾಗೂ 10000 ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ.
ಅಂದ ಹಾಗೇ ಈ ಪೋಸ್ಟ್ ಶೇರ್ ಮಾಡಿರೋದು ಸ್ವತಃ ಡೆರೆಕ್ ನ ತಂದೆ. ಏನಾಗಿದೆ ಅಂದ್ರೆ ಡೆರೆಕ್ ಆಟ ಆಡುವಾಗ ಅಕಸ್ಮಾತ್ ಆಗಿ ಅವನ ಸೈಕಲ್ ಪಕ್ಕದ ಮನೆಯ ಕೋಳಿಗೆ ತಾಗಿ ಅದು ಸತ್ತುಹೋಗಿದೆ. ಆದರೆ ಅದು ಸತ್ತುಹೋಗಿದೆ ಎಂಬ ಅರಿವಿರದ ಡೆರೆಕ್ ಕೂಡಲೇ ಆ ಕೋಳಿಯನ್ನು ಮನೆಗೆ ತಂದಿದ್ದಾನೆ. ಅಪ್ಪ ಅಮ್ಮನ ಬಳಿ ಕೋಳಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗೋಣ ಎಂಬುದಾಗಿ ಹಟ ಹಿಡಿದಿದ್ದಾನೆ. ಅವನಿಗೆ ಅರ್ಥ ಮಾಡಿಸುವಲ್ಲಿ ವಿಫಲರಾದ ಪೋಷಕರು ಅವನನ್ನೇ ಆಸ್ಪತ್ರೆಗೆ ಹೋಗಲು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಡೆರೆಕ್ ತನ್ನ ಬಳಿಯಿದ್ದ ಹತ್ತು ರೂಪಾಯಿಗಳನ್ನು ತೆಗೆದುಕೊಂಡು ಸತ್ತುಹೋಗಿರುವ ಕೋಳಿಯ ಜೊತೆಗೆ ಆಸ್ಪತ್ರೆಗೆ ಓಡಿದ್ದಾನೆ. ಆ ಆಸ್ಪತ್ರೆಯ ನರ್ಸ್ ಈ ಮಗುವಿನ ಮುಗ್ಧತೆಗೆ ಮನಸೋತು ಈ ಫೋಟೋ ಕ್ಲಿಕ್ಕಿಸಿದ್ದಾರೆ. ಇದೇ ಫೋಟೋ ಈಗ ಇಂಟರ್ ನೆಟ್ ನಲ್ಲಿ ಸಾಕಷ್ಟು ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಕೋಳಿಗೆ ಚಿಕಿತ್ಸೆ ನೀಡದೇ ವಾಪಾಸ್ ಕಳುಹಿಸಿದ್ದಾರೆ. ಮೊದಲೇ ಬೇಜಾರಾಗಿದ್ದ ಡೆರೆಕ್ ಅಳುತ್ತಲೇ ಮನೆಗೆ ಬಂದು ಮತ್ತೆ ತಂದೆಯ ಸಹಾಯ ಯಾಚಿಸಿದ್ದಾನೆ. ಮತ್ತೆ ನೂರು ರೂಪಾಯಿ ಪಡೆದುಕೊಂಡು ಆಸ್ಪತ್ರೆಗೆ ಓಡಿದ್ದಾನೆ.
ಮತ್ತೆ ನಿರಾಶೆಯಿಂದ ಮನೆಗೆ ಬಂದ ಮಗನಿಗೆ ಪೋಷಕರು ಕೊನೆಗೂ ಕೋಳಿ ಸತ್ತು ಹೋಗಿರುವುದನ್ನೂ ಸತ್ತ ಕೋಳಿಗೆ ಚಿಕಿತ್ಸೆ ಕೊಡಲಾಗದು ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ನಂತರ ಫೇಸ್ ಬುಕ್ ನಲ್ಲಿ ವೈರಲ್ ಆಗಿರುವ ಈ ಸ್ಟೋರಿಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಮಗುವಿನ ಪರಿಶುದ್ಧ ಹೃದಯವನ್ನೂ, ಅಲ್ಲಿರುವ ಪ್ರೀತಿಯನ್ನೂ ಶ್ಲಾಘಿಸುತ್ತಾ, ದೇವರು ಆತನಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ.
ಇದಿಲ್ಲಿಗೇ ನಿಲ್ಲಲಿಲ್ಲ. ಈ ವಿಷಯ ಡೆರೆಕ್ ನ ಶಾಲೆಗೂ ತಿಳಿದು ಅವನಿಗೆ, ಅವನ ಮಾನವೀಯತೆ ತುಂಬಿದ ಪುಟ್ಟ ಹೃದಯಕ್ಕೆ ಗೌರವ ಸಲ್ಲಿಸಿದ್ದಾರೆ. ಒಂದು ಪ್ರೋತ್ಸಾಹಪೂರ್ವಕ ಪ್ರಮಾಣಪತ್ರದ ಜೊತೆಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಡೆರೆಕ್ ನ ಈ ವರ್ತನೆಯ ಮುಗ್ಧತೆಗೆ, ಮಾನವೀಯತೆಗೆ ಸ್ವತಃ ಆತನ ಪೋಷಕರೇ ಅಚ್ಚರಿಗೊಂಡಿದ್ದಾರೆ. ಮಾನವೀಯತೆ ಮರೆತ ಪ್ರತೀ ಮನುಷ್ಯರಿಗೂ ತನ್ನದೇ ಭಾಷೆಯಲ್ಲಿ ಪಾಠ ಕಲಿಸಿದ್ದಾನೆ 6 ವರ್ಷದ ಚೂಟಿ ಬಾಲಕ ಡೆರೆಕ್.
– ಅಂಬಿಕಾ ಸೀತೂರು, ಬೆಂಗಳೂರು