ಬೆಂಗಳೂರು : ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಭಗ್ನ ಪ್ರೇಮಿವೊಬ್ಬ ತನ್ನ ಪ್ರೇಯಸಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿತ್ಯಸ್ವಿ ಮಾರಣಾಂತಿಕ ಹಲ್ಲೆಗೆ ಒಳಗಾದ ಯುವತಿಯಾಗಿದ್ದು, ಕೊಲೆಗೆ ಪ್ರಯತ್ನ ಮಾಡಿದ ಪಾಗಲ್ ಪ್ರೇಮಿಯನ್ನು ಗಿರೀಶ್ ಎಂದು ಗುರುತಿಸಲಾಗಿದೆ. ಈತ ತನ್ನ ಪ್ರೇಯಸಿ ನಿತ್ಯಶ್ರೀಯನ್ನು ಮಚ್ಚಿನಿಂದ ಐದು ಬಾರಿ ಕುತ್ತಿಗೆ, ತಲೆ, ಕಾಲು, ಹೊಟ್ಟೆ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಿತ್ಯಶ್ರೀ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಂಡ್ಯದಲ್ಲಿ ಹುಟ್ಟಿದ ಪ್ರೇಮ
ಗಿರೀಶ್ ಮತ್ತು ನಿತ್ಯಶ್ರೀ ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದ ವೇಳೆ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ನಂತರ ಓದು ಮಗಿದ ಮೇಲೆ ನಿತ್ಯಶ್ರೀ ಮಂಡ್ಯದಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ವಾಸವಿದ್ದ ನಿತ್ಯಶ್ರೀ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನಿತ್ಯಶ್ರೀ ಹಿಂದೆಯೇ ಬೆಂಗಳೂರಿಗೆ ಬಂದ ಗಿರೀಶ್, ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ ಕೆಲವು ತಿಂಗಳಿಂದ ಇಬ್ಬರ ನಡುವೆ ಬಿನ್ನಾಭಿಪ್ರಾಯ ಉಂಟಾಗಿತ್ತು.
ಇವರ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ಕಾರಣಕ್ಕಾಗಿ ನಿತ್ಯಶ್ರೀಗೆ ಆಕೆಯ ಮನೆಯವರು ಮುಂದಿನ ಜೂನ್ ತಿಂಗಳಲ್ಲಿ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದನ್ನು ತಿಳಿದ ಗಿರೀಶ್ ಇಂದು ಯುವತಿ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಕೆಲಸಕ್ಕೆ ರಾಜೀನಾಮೆ ನೀಡಲು ತೆರಳಿದ್ದ ವೇಳೆ ಮಂಡ್ಯದಿಂದ ಬಂದು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಸದ್ಯ ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.