ಕೇವಲ ನಾಲ್ಕು ಸಾವಿರಕ್ಕೆ ಸ್ನೇಹಿತನ ಕೊಲೆ kalaburagi
ಕಲಬುರಗಿ : ಕೇವಲ ನಾಲ್ಕು ಸಾವಿರ ರೂಪಾಯಿಗೆ ವ್ಯಕ್ತಿಯೋರ್ವ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಅವರಾದ-ಆಲಗೂಡ ಗ್ರಾಮದಲ್ಲಿ ನಡೆಡಿದೆ. ಸಂತೋಷ ಹೂಗಾರ್ ಕೊಲೆಯಾದ ಯುವಕನಾಗಿದ್ದು, ಶಿವಾಜಿ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.
ಸಂತೋಷ್ ತನ್ನ ಸ್ನೇಹಿತನಾದ ಶಿವಾಜಿಗೆ 4 ಸಾವಿರ ರೂ. ಸಾಲವಾಗಿ ಕೊಟ್ಟಿದ್ದು, ಹಣ ವಾಪಸ್ ನೀಡದ ಕಾರಣ ಹುಡುಗರಿಂದ ಹೊಡೆಸುವುದಾಗಿ ದಮ್ಕಿ ಹಾಕಿದ್ದಂತೆ. ಇದರಿಂದ ಕೋಪಗೊಂಡ ಶಿವಾಜಿ, ತನ್ನ ಇನ್ನೊಬ್ಬ ಸ್ನೇಹಿತ ಅರುಣಕುಮಾರನೊಂದಿಗೆ ಸೇರಿ ಸಂತೋಷನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ, ಡಾಬಾವೊಂದರಲ್ಲಿ ಕಂಠಪೂರ್ತಿ ಕುಡಿಸಿದ್ದಾರೆ. ಬಳಿಕ ಅಲ್ಲಿಂದ ಅವರಾದ – ಆಲಗೂಡ ರಸ್ತೆಗೆ ಆಟೋದಲ್ಲಿಯೇ ಕರೆದುಕೊಂಡು ಹೋಗಿ ಜಗಳ ತೆಗೆದು, ಮುಖ ಹಾಗೂ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದಾರೆ.
ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ