ಮದುವೆ ಮನೆಯಲ್ಲಿ ಊಟ ಮಾಡಿ 100ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.
ಅಲ್ಲದೇ, ಓರ್ವ ವ್ಯಕ್ತಿ ದೃಷ್ಟಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಬಾ ಸಾಹೇಬ್ ಬೇಗ್(37) ದೃಷ್ಟಿ ಕಳೆದುಕೊಂಡ ವ್ಯಕ್ತಿ ಎನ್ನಲಾಗಿದ್ದು, ಸೋಮವಾರ ಊಟ ಮಾಡಿ ಮನೆಗೆ ಮರಳಿ ಹೋದ ನಂತರ ವಾಂತಿ ಭೇದಿ (Food Poison) ಕಾಣಿಸಿಕೊಂಡಿತ್ತು. ನಂತರ ಏಕಾಏಕಿ ದೃಷ್ಟಿಯೇ ಕಾಣದೆ ಕಂಗಾಲಾದ ಬಾಬಾಸಾಹೇಬ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಬೆಳಗಾವಿಯ ಬಿಮ್ಸ್ ವೈದ್ಯಕೀಯ ಅಧೀಕ್ಷಕ ಎ.ಬಿ.ಪಾಟೀಲ್, ಫುಡ್ ಪಾಯಿಸನ್ ಆಗಿ ದೃಷ್ಟಿ ಹೋಗಿದೆ ಎಂದು ಹೇಳಿದ್ದಾರೆ. ಕಣ್ಣು ಫಂಡೋಸ್ಕೋಪಿಕ್ ಮಾಡಿ ನೋಡಿದಾಗ ನಾರ್ಮಲ್ ಇದೆ. ಯಾವ ಕಾರಣಕ್ಕೆ ದೃಷ್ಟಿ ಹೋಗಿದೆ ಎನ್ನುವುದು ನಿಖರವಾಗಿ ತಿಳಿದಿಲ್ಲ. ನೇತ್ರ ತಜ್ಞರು ಪರೀಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.