ಅಪ್ಪ- ಅಮ್ಮನ ಜಗಳದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ.
ಹೆತ್ತ ತಾಯಿಯೇ ಇಲ್ಲಿ ಮಕ್ಕಳನ್ನು ಕೊಲೆ ಮಾಡಿದ್ದಾಳೆ. ಭುವನ್(6), ಚೇತನ್(3) ಕೊಲೆಯಾದ ಮಕ್ಕಳು. ಹಡೆದ ತಾಯಿ ಸುನಿತಾ ಎಂಬುವವಳೇ ಮಕ್ಕಳನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸುನಿತಾ ದಂಪತಿಗೆ ಇಬ್ಬರು ಮುದ್ದಾದ ಭುವನ್ ಮತ್ತು ಚೇತನ್ ಎಂಬ ಇಬ್ಬರು ಮಕ್ಕಳಿದ್ದರು. ಸುನಿತಾ ಅವರ ಮೇಲೆ ಪತಿ ಶಂಕಿಸುತ್ತಿದ್ದ. ಅದರಂತೆ ಮಕ್ಕಳು ನನಗೆ ಹುಟ್ಟಿಲ್ಲ ಎಂದು ಆಗಾಗ ಜಗಳ ಮಾಡುತ್ತಿದ್ದ. ಇದರಿಂದ ಬೇಸರಗೊಂಡಿದ್ದ ಸುನಿತಾ ಮಕ್ಕಳನ್ನು ಕೊಲ್ಲಲು ನಿರ್ಧರಿಸಿಸಿದ್ದಳು ಎನ್ನಲಾಗಿದೆ. ತನ್ನ ಕ್ರೂರ ಪ್ಲಾನ್ ನಂತೆ ಮೇ 11ರಂದು ಮುಗ್ಧ ಇಬ್ಬರು ಮಕ್ಕಳ ಕತ್ತು ಹಿಸುಕಿ ತಾಯಿ ಕೊಂದಿದ್ದಾಳೆ. ಮಕ್ಕಳನ್ನು ಕೊಲೆ ಮಾಡಿದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಸುನಿತಾ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಗ ಮನೆಯಲ್ಲಿದ್ದ ಪತಿ, ಅತ್ತೆ, ಮಾವ ಬಂದು ನೋಡಿದ್ದಾರೆ. ಹೀಗಾಗಿ ಅವರು ರಕ್ಷಿಸಿದ್ದಾರೆ.
ಆದರೆ, ಸಾಕ್ಷಿ ನಾಶ ಮಾಡಲು ರಾತ್ರೋರಾತ್ರಿ ಶವವನ್ನು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ನಂತರ ಅಕ್ಕ ಪಕ್ಕದವರಿಂದ ಮಾಹಿತಿ ತಿಳಿದುಕೊಂಡು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆದಿದೆ.