ನವದೆಹಲಿ: 2047ರ ವೇಳೆಗೆ ಭಾರತವನ್ನು (India) ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ʻರಾಷ್ಟ್ರೀಯ ಶತ್ರುಗಳʼ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಗುಡುಗಿದ್ದಾರೆ.
ಸ್ವಾಮಿನಾರಾಯಣ ದೇವಸ್ಥಾನದ 200ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಗುಜರಾತ್ ನ (Gujarat) ವಡ್ತಾಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಜಾತಿ, ಧರ್ಮ, ಭಾಷೆ, ಮೇಲೂ, ಕೀಳು, ಗಂಡು-ಹೆಣ್ಣು, ಗ್ರಾಮ, ನಗರಗಳ ಆಧಾರದಲ್ಲಿ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ. ವೈರಿಗಳ ಈ ಪ್ರಯತ್ನದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದ್ದು, ನಾವೆಲ್ಲ ಒಂದಾಗಬೇಕಿದೆ ಎಂದು ಹೇಳಿದ್ದಾರೆ.
ಜಾತಿ ಜನಗಣತಿಗೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಬೇಡಿಕೆಯ ನಡುವೆಯೇ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಅದು ಬಿರುಕು ಮೂಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.