ಬೆಂಗಳೂರು, ಮೇ 21 : ಜಗತ್ತನ್ನೇ ಕಾಡಿದ ಕೊರೊನಾ ಸೋಂಕಿನಿಂದ ರಕ್ಷಿಸಿ ಕೊಳ್ಳಲು ಹೊಸ ಹೊಸ ತಂತ್ರಜ್ಞಾನಗಳ ಹುಡುಕಾಟ ಈಗಾಗಲೇ ಶುರುವಾಗಿದೆ. ಕೊರೋನಾ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾದ ಅನಿವಾರ್ಯತೆಯಿಂದ , ಸಾಮಾಜಿಕ ಸಂಪರ್ಕ ಇಲ್ಲದೇ ಸಂವಾದ ನಡೆಸಬಹುದಾದ ತಂತ್ರಜ್ಞಾನಗಳು ಇದೀಗ ಮಹತ್ವ ಪಡೆದುಕೊಳ್ಳುತ್ತಿದೆ. ಹಾಗಾಗಿ ಇಲ್ಲಿಯವರೆಗೆ ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಡಿಜಿಟಲ್ ಧ್ವನಿ ತಂತ್ರಜ್ಞಾನ ಇದೀಗ ಎಲ್ಲರ ಗಮನ ಸೆಳೆದಿದ್ದು, ಆಕರ್ಷಕ ಮಾಧ್ಯಮವಾಗಿ ಹೊರಹೊಮ್ಮಿದೆ. ಕೊರೋನಾ ಬಿಕ್ಕಟ್ಟಿನ ಸಂದರ್ಭಕ್ಕಿಂತ ಮೊದಲು ಅಷ್ಟೇನೂ ಗಮನ ಸೆಳೆಯದಿದ್ದ ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ ಮತ್ತು ಆ್ಯಪಲ್ ಸಿರಿ ಒಳಗೊಂಂಡಂತೆ ಹಲವಾರು ವಾಯ್ಸ್ ಆ್ಯಕ್ಟಿವೇಟೆಡ್ ವ್ಯವಸ್ಥೆಗಳ ಬಳಕೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಅವಧಿಯಲ್ಲಿ ಬಹಳಷ್ಟು ಹೆಚ್ಚಾಗಿದೆ.
ವಾಯ್ಸ್ ಅಸಿಸ್ಟೆಂಟ್ ಎಂದರೆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇರುವಂತಹುದು ಎಂಬ ವ್ಯಾಪ್ತಿಯಿಂದ ಅದರಾಚೆಗೂ ವ್ಯಾಪಿಸಿತು. ಕೊರೋನಾ ವೈರಸ್ ಸೋಂಕಿನ ಭೀತಿಯಿಂದ ವಿಶ್ವದಾದ್ಯಂತ ಸ್ಮಾರ್ಟ್ ಹೋಮ್ ನಿಯಂತ್ರಣ, ವೈದ್ಯಕೀಯ ಅಪ್ಲಿಕೇಶನ್ ಒಳಗೊಂಡಂತೆ ಹಲವಾರು ವಹಿವಾಟು ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆಗೆ ಹೇರಳ ಅವಕಾಶಗಳು ಡಿಜಿಟಲ್ ಧ್ವನಿ ತಂತ್ರಜ್ಞಾನಕ್ಕೆ ತೆರೆದುಕೊಂಡಿವೆ. ಕೊರೋನಾ ಸೋಂಕಿನಿಂದ ಉಂಟಾದ ಬಿಕ್ಕಟ್ಟಿನಿಂದಾಗಿ ಬಹುತೇಕ ಕ್ಷೇತ್ರಗಳು ಭಾರಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಒಳಗಾಗಿದ್ದರೆ, ಡಿಜಿಟಲ್ ಧ್ವನಿ ತಂತ್ರಜ್ಞಾನ ಮಾರುಕಟ್ಟೆ ಮಾತ್ರ ವೇಗವಾಗಿ ಚೇತರಿಸಿಕೊಳ್ಳುತ್ತಿದೆ.
ಸದ್ಯದ ಮಟ್ಟಿಗೆ ಕೊರೋನಾ ಸೋಂಕು ಸಂಪೂರ್ಣವಾಗಿ ನಾಶಗೊಳ್ಳುವ ಸಾಧ್ಯತೆ ಕಡಿಮೆ ಇರುವ ಕಾರಣ ಮುಂದಿನ ದಿನಗಳನ್ನು ಬೇಕಾದ ಮುಂಜಾಗ್ರತಾ ಕ್ರಮಗಳೊಂದಿಗೆ ಸೋಂಕಿನೊಂದಿಗೆ ನಮ್ಮ ಬದುಕು ಸಾಗಿಸ ಬೇಕಾಗಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಂಡು, ವೈಯುಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯತೆ ಮತ್ತು ಕರ್ತವ್ಯವಾಗಲಿದೆ. ಒಂದು ವೇಳೆ ಕೊರೊನಾ ನಿಯಂತ್ರಣ ಸಾಧ್ಯವಾದರೂ ಹಲವಾರು ವರ್ಷಗಳ ಕಾಲ ಕೊರೊನಾ ಸೋಂಕಿನ ಭೀತಿ ತಪ್ಪಿದ್ದಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದ ಜನರು ಒಬ್ಬರಿಗೊಬ್ಬರು ಮುಖಾಮುಖಿಯಾಗಲು ಹಿಂದೇಟು ಹಾಕುವ ಸಂಭವವಿದೆ. ಇಂತಹ ಸಂದರ್ಭದಲ್ಲಿ ಜನರು ವಾಯ್ಸ್ ಅಸಿಸ್ಟೆಂಟ್ ಪರ್ಯಾಯ ಸಂಪರ್ಕ ಸಾಧನಗಳ ಮೊರೆ ಹೋಗಲಿರುವ ಸಾಧ್ಯತೆ ಇದ್ದು, ಡಿಜಿಟಲ್ ಧ್ವನಿ ತಂತ್ರಜ್ಞಾನ ಭವಿಷ್ಯದ ತಂತ್ರಜ್ಞಾನವಾಗಿ ಹೊರಹೊಮ್ಮಲಿದೆ ಅಷ್ಟೇ ಅಲ್ಲ ಜನಪ್ರಿಯ ಮತ್ತು ಅನಿವಾರ್ಯ ಸಂವಹನ ಮಾಧ್ಯಮವಾಗಿ ಮೂಡಿ ಬರಲಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವಾಯ್ಸ್ ಅಸಿಸ್ಟೆಂಟ್ ಬಳಕೆ ಬಹಳಷ್ಟು ಮಹತ್ವ ಪಡೆದುಕೊಳ್ಳಲಿದ್ದು, ನಿತ್ಯ ಜೀವನದಲ್ಲಿ ಅನಿವಾರ್ಯ ಮಾಧ್ಯಮವಾಗಿ ಮೂಡಿ ಬರಲಿದೆ.
ನಮ್ಮ ದಿನ ನಿತ್ಯದ ಬದುಕಿನಲ್ಲಿ ಬಳಕೆಯಾಗುವ ಟಿ.ವಿ.ಯ ರಿಮೋಟ್, ಲೈಟ್ ಸ್ವಿಚ್, ಮೊಬೈಲ್ ಫೋನ್, ಬಾಗಿಲುಗಳ ಹ್ಯಾಂಡಲ್ ಇತ್ಯಾದಿಗಳನ್ನು ವಾಯ್ಸ್ ಅಸಿಸ್ಟೆಂಟ್ ಮೂಲಕ ಸಂವಹನ ನಡೆಸಿ ಸ್ಪರ್ಶಿಸುವುದನ್ನು ತಪ್ಪಿಸಬಹುದಾಗಿದೆ. ಮನೆ, ಕಛೇರಿಗಳಲ್ಲೂ ಡಿಜಿಟಲ್ ಧ್ವನಿ ತಂತ್ರಜ್ಞಾನ ಬಹಳಷ್ಟು ಮಹತ್ವ ಪಡೆಯಲಿದ್ದು, ಬದಲಾದ ವ್ಯವಸ್ಥೆಯಲ್ಲಿ, ಸುರಕ್ಷತೆಯ ಕಾರಣದಿಂದ ಅನಿವಾರ್ಯ ಎನಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಸಾಮಾಜಿಕ ಸಂಪರ್ಕ ತಪ್ಪಿಸಲು, ಸ್ಮಾರ್ಟ್ ಲಾಕ್ಸ್, ಸ್ಮಾಟ್ಸ್ ಡೋರ್ ಬೆಲ್ಸ್, ಸ್ಮಾರ್ಟ್ ಸ್ಪೀಕರ್ಗಳು ಸೇರಿದಂತೆ ಇನ್ನೂ ಅನೇಕ ಸ್ಮಾರ್ಟ್ ಸಾಧನಗಳು ಬಳಕೆಗೆ ಬರಲಿದ್ದು, ಡಿಜಿಟಲ್ ಧ್ವನಿ ತಂತ್ರಜ್ಞಾನದಿಂದ ಅನೇಕ ಹೊಸ ಅಪ್ಲಿಕೇಶನ್ ತಂತ್ರಜ್ಞಾನಗಳು ಅಭಿವೃದ್ಧಿಯಾಗಬಹುದು ಎನ್ನುತ್ತಾರೆ ಅಮೆರಿಕದ ಎಬಿಐ ಸಂಶೋಧನಾ ಸಂಸ್ಥೆಯ ಜೋನಾಥನ್ ಕಾಲಿನ್ಸ್. ಜಾಗತಿಕ ಅರ್ಥಿಕ ದುಸ್ಥಿತಿಗೇ ಕಾರಣವಾಗಿರುವ ಕೊರೊನಾ ಸೋಂಕು, ಡಿಜಿಟಲ್ ಧ್ವನಿ ಎಂಬ ಹೊಸತೊಂದು ತಂತ್ರಜ್ಞಾನಕ್ಕೆ ಮಾತ್ರ ಬೇಡಿಕೆ ದೊರಕಿಸಿಕೊಟ್ಟಿರುವುದು ಸತ್ಯ








