ಲಂಡನ್ ಗೆ ಕಳ್ಳಸಾಗಣೆ ಮಾಡಲಾಗಿದ್ದ ಒಂಬತ್ತನೇ ಶತಮಾನದ ಅಪರೂಪದ ಶಿವನ ಪ್ರತಿಮೆ ಮರಳಿ ಭಾರತಕ್ಕೆ
ಲಂಡನ್, ಜುಲೈ 31: ರಾಜಸ್ಥಾನದ ದೇವಾಲಯವೊಂದರಿಂದ ಕದ್ದು ಯುಕೆಗೆ ಕಳ್ಳಸಾಗಣೆ ಮಾಡಲಾಗಿದ್ದ ಒಂಬತ್ತನೇ ಶತಮಾನದ ಅಪರೂಪದ ಶಿವನ ಪ್ರತಿಮೆ ಪುರಾತತ್ವ ಸರ್ವೇ ಆಫ್ ಇಂಡಿಯಾ (ಎಎಸ್‌ಐ) ಗೆ ಹಸ್ತಾಂತರವಾಗಲಿದೆ.
ಇದು ಸುಮಾರು ನಾಲ್ಕು ಅಡಿ ಎತ್ತರದಲ್ಲಿರುವ, ಪ್ರತಿಹರ ಶೈಲಿಯಲ್ಲಿನ ನಟರಾಜ ನ ಭಂಗಿಯಲ್ಲಿರುವ ಶಿವನ ಅಪರೂಪದ ಚಿತ್ರಣವಾಗಿದೆ. ಇದನ್ನು ಫೆಬ್ರವರಿ 1998 ರಲ್ಲಿ ರಾಜಸ್ಥಾನದ ಬರೋಲಿಯ ಗತೇಶ್ವರ ದೇವಸ್ಥಾನದಿಂದ ಕಳವು ಮಾಡಲಾಗಿದ್ದು, 2003 ರಲ್ಲಿ ಪ್ರತಿಮೆಯನ್ನು ಯುಕೆಗೆ ಕಳ್ಳಸಾಗಣೆ ಮಾಡಲಾಗಿದೆ ಎಂದು ತಿಳಿದು ಬಂತು.
ಬಳಿಕ ಯುಕೆ ಅಧಿಕಾರಿಗಳ ಬೆಂಬಲದೊಂದಿಗೆ ಲಂಡನ್‌ನಲ್ಲಿ ವಿಗ್ರಹವನ್ನು ಹೊಂದಿದ್ದ ಖಾಸಗಿ ಸಂಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು . ಈ ವಿಗ್ರಹ ಭಾರತದೊಂದಿಗೆ ಆಧ್ಯಾತ್ಮಿಕ ನಂಟು ಹೊಂದಿದೆ ಎಂದು ಅರಿತ ಅವರು ಯುಕೆಯಲ್ಲಿರುವ ಭಾರತೀಯ ಹೈಕಮಿಷನ್ ಗೆ ಸ್ವಯಂಪ್ರೇರಣೆಯಿಂದ ವಿಗ್ರಹವನ್ನು ಹಿಂತಿರುಗಿಸಿದ್ದರು.
ಆಗಸ್ಟ್ 2017 ರಲ್ಲಿ, ಎಎಸ್ಐ ತಜ್ಞರ ತಂಡವು ಇಂಡಿಯಾ ಹೌಸ್ ಗೆ ಭೇಟಿ ನೀಡಿ ವಿಗ್ರಹವನ್ನು ಪರೀಕ್ಷಿಸಿ ಇದು ಗತೇಶ್ವರ ದೇವಸ್ಥಾನದಿಂದ ಕಳವು ಮಾಡಿದ ಅದೇ ಪ್ರತಿಮೆ ಎಂದು ದೃಢಪಡಿಸಿದ್ದರು.
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮತ್ತು ಅದನ್ನು ಜಗತ್ತಿಗೆ ಪ್ರದರ್ಶಿಸಲು ಭಾರತದ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ಕಳ್ಳತನವಾದ ಮತ್ತು ಕಳ್ಳಸಾಗಣೆ ಮಾಡಿದ ಭಾರತೀಯ ಪ್ರಾಚೀನ ವಸ್ತುಗಳ ತನಿಖೆ ಮತ್ತು ಮರುಸ್ಥಾಪನೆಯನ್ನು ಭಾರತದ ಕಾನೂನು ಜಾರಿ ಏಜೆನ್ಸಿಗಳು ಸಕ್ರಿಯವಾಗಿ ಅನುಸರಿಸುತ್ತಿವೆ
ಇದರ ಪರಿಣಾಮವಾಗಿ, ಯುಎಸ್, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳಿಂದ ಪ್ರಾಚೀನ ವಸ್ತುಗಳು ಮತ್ತು ವಿಗ್ರಹಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿದೆ.
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಯಶಸ್ವಿಯಾಗಿ ಮರುಸ್ಥಾಪಿಸುವುದು ಮತ್ತು ವಾಪಸಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಲಂಡನ್‌ನ ಭಾರತದ ಹೈ ಕಮಿಷನ್ (ಎಚ್‌ಸಿಐ) ಹೇಳಿದೆ.
ಕದ್ದ ಕಲಾಕೃತಿಗಳನ್ನು ಪತ್ತೆಹಚ್ಚಲು, ವಶಪಡಿಸಿಕೊಳ್ಳಲು ಮತ್ತು ಹಿಂಪಡೆಯಲು ಎಚ್‌ಸಿಐ ಪ್ರಸ್ತುತ ವಿವಿಧ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ, ಎಎಸ್ಐ, ಭಾರತ ಸರ್ಕಾರ, ರಾಜ್ಯ ಮತ್ತು ಕೇಂದ್ರ ಪ್ರಾಧಿಕಾರಗಳು, ಯುಕೆ ಕಾನೂನು ಜಾರಿ ಸಂಸ್ಥೆಗಳು ಮತ್ತು ಸ್ವತಂತ್ರ ತಜ್ಞರ ಸಹಭಾಗಿತ್ವದಲ್ಲಿ, ನಮ್ಮ ಸಾಂಸ್ಕೃತಿಕ ಪರಂಪರೆಯ ಹೆಚ್ಚಿನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ನಾವು ನಂಬಿದ್ದೇವೆ ಎಂದು ಭಾರತದ ಹೈಕಮಿಷನ್ ಹೇಳಿದೆ