ಎಸ್ಸೆಸ್ಸಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ. 83.83ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಟಾಪ್ 3 ಜಿಲ್ಲೆಗಳಲ್ಲ ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದು, ಮಂಡ್ಯ ಹಾಗೂ ಹಾಸನ ನಂತರದ ಸ್ಥಾನದಲ್ಲಿವೆ.
ಈ ಬಾಲಿ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿಯ ಅನುಪಮಾ ಕೂಡ ಈ ಪೈಕಿ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಕಿತ್ತು ತಿನ್ನುವ ಬಡತನ ಹಾಗೂ ತಂದೆ ಕಳೆದುಕೊಂಡ ನೋವಿನಲ್ಲಿಯೂ ಅನುಪಮಾ 625ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಅನುಪಮಾ ತಂದೆ ಕಳೆದ ವರ್ಷ ನಿಧನರಾಗಿದ್ದು, ತಾಯಿ ರಾಜಶ್ರೀ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಇದರ ಮಧ್ಯೆಯೂ ಪುತ್ರಿಯ ಶಿಕ್ಷಣಕ್ಕೆ ಒತ್ತು ನೀಡಿದ್ದು, ತಾಯಿಯ ನೀರಿಕ್ಷೆಯನ್ನು ಅನುಪಮಾ ಹುಸಿ ಮಾಡಿಲ್ಲ. ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಅನುಪಮಾ ಮಾಡಿರುವ ಈ ಸಾಧನೆಗೆ ಶಿಕ್ಷಕ ವೃಂದ ಸಂತಸ ವ್ಯಕ್ತಪಡಿಸಿದೆ. ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿರುವ ಅನುಪಮಾ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.






