ಗದಗ: ಬಸ್ (Bus) ಮತ್ತು ಟಾಟಾ ಸುಮೋ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನೆರೇಗಲ್ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಅಲ್ಲದೇ, ಈ ಘಟನೆಯಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.
ಟಾಟಾ ಸುಮೋ ವಾಹನವು ಗಜೇಂದ್ರಗಡ ಮಾರ್ಗದಿಂದ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ತೆರಳುತ್ತಿತ್ತು. ಬಸ್ ಗದಗದಿಂದ (Gadag) ಗಜೇಂದ್ರಗಡಕ್ಕೆ ತೆರಳುತ್ತಿತ್ತು. ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಗಾಯಗೊಂಡ ಮಕ್ಕಳನ್ನು ಮಹೇಶ್, ದಿಂಗಾಲೇಶ್ವರ, ಪ್ರಭುದೇವ್ ಹಾಗೂ ಅನುಶ್ರೀ ಎಂದು ಗುರುತಿಸಲಾಗಿದೆ. ಆದರೆ, ಸಾವನ್ನಪ್ಪಿದವರ ಹೆಸರು ತಿಳಿದು ಬಂದಿಲ್ಲ.
ಗಾಯಗೊಂಡಿರುವ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಗದಗದ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಜಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಟಾಟಾ ಸುಮೋ ಚಾಲಕನ ಅತೀ ವೇಗವೇ ಈ ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ನೆರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.