ವಾಷಿಂಗ್ಟನ್: ಅಮೆರಿಕಾದಲ್ಲಿ (America) ಭೀಕರ ಅಪಘಾತವೊಂದು ಸಂಭವಿಸಿದ್ದು, ಭಾರತೀಯ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುಜರಾತ್ (Gujarat) ಮೂಲದ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಸಾವನ್ನಪ್ಪಿರುವ ದುರ್ದೈವಿಗಳು. ದಕ್ಷಿಣ ಕೆರೊಲಿನಾದ ಗ್ರೀನ್ವಿಲ್ಲೆ ಕೌಂಟಿಯಲ್ಲಿ ಕಾರು ಅಪಘಾತದಲ್ಲಿಯೇ ಮಹಿಳೆಯರು ಸಾವನ್ನಪ್ಪಿದ್ದಾರೆ.
I-85 ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ವೇಗವಾಗಿ ಚಲಿಸಿ ಸೇತುವೆಯ ಎದುರು ಭಾಗದಲ್ಲಿದ್ದ ಮರಗಳಿಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಕನಿಷ್ಠ 20 ಅಡಿಗಳಷ್ಟು ಗಾಳಿಯಲ್ಲಿ ಕಾರು ಹಾರಿದೆ ಎನ್ನಲಾಗಿದೆ. ಮಿತಿಗಿಂತ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಲಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ಹೇಳಿದ್ದಾರೆ.
ಮರಕ್ಕೆ ಡಿಕ್ಕಿ ಹೊಡೆದ ಕಾರು ಅಲ್ಲಿಯೇ ಸಿಲುಕಿತ್ತು ಎನ್ನಲಾಗಿದೆ. ಸ್ಥಳಕ್ಕೆ ರಕ್ಷಣಾ ತಂಡ ತೆರಳಿ ಶವಗಳನ್ನು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.