ಹೊಸದಿಲ್ಲಿ, ಜೂನ್ 3 : ಲಾಕ್ ಡೌನ್ ಹಿನ್ನಲೆಯಲ್ಲಿ ಹೆತ್ತವರಿಂದ ಬೇರ್ಪಟ್ಟ ಬಾಲಕ ಸಾಮಾಜಿಕ ಜಾಲತಾಣ ಟ್ವಿಟರ್ ನಿಂದಾಗಿ ಸತತ 45 ದಿನಗಳ ಬಳಿಕ ತಂದೆ ತಾಯಿ ಜೊತೆ ಸೇರಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಬಿಹಾರ ಮೂಲದವರಾದ ವಿಶಾಲ್ ಪಾಠಕ್ ಎನ್ನುವ 12 ವರ್ಷದ ಬಾಲಕನ ತಂದೆತಾಯಿ ದೆಹಲಿಯಲ್ಲಿ ದುಡಿಯುತ್ತಿದ್ದರು. ಮಾರ್ಚ್ ತಿಂಗಳಲ್ಲಿ ಅವರಿಗೆ ತಮ್ಮ ಸಂಬಂಧಿಕರೊಬ್ಬರ ಮದುವೆಯ ಕಾರಣಕ್ಕೆ ಬಿಹಾರಕ್ಕೆ ಹೋಗಬೇಕಾಗಿ ಬಂತು. ಅದೇ ಸಮಯದಲ್ಲಿ ವಿಶಾಲ್ ನ ಶಾಲಾ ಪರೀಕ್ಷೆ ಇದ್ದುದರಿಂದ ಅವನನ್ನು ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಬಿಟ್ಟು ಅವರು ಬಿಹಾರಕ್ಕೆ ತೆರಳಿದರು.
ಈ ನಡುವೆ ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಲಾಕ್ ಡೌನ್ ಆದೇಶ ಜಾರಿಗೊಳಿಸಿದರು. ಬಸ್, ರೈಲು, ವಿಮಾನ ಸೇವೆ ರದ್ದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ದೇಶದಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಯಿತು.
ವಿಶಾಲ್ ಪಾಠಕ್ ದೆಹಲಿಯಲ್ಲಿ ಸಿಲುಕಿ ಹಾಕಿಕೊಂಡರೆ, ಆತನ ತಂದೆ ತಾಯಿ ಬಿಹಾರದ ಸಮಿಸ್ತಾಪುರದಲ್ಲಿ ಉಳಿಯುವಂತಾಯಿತು. ವಿಶಾಲ್ ನನ್ನು ಬಿಟ್ಟಿದ್ದ ದೂರದ ಸಂಬಂಧಿಕರು ಏಕಾಏಕಿಯಾಗಿ ಲಾಕ್ ಡೌನ್ ಸಮಯದಲ್ಲಿ ಆ 12 ವರ್ಷದ ಬಾಲಕನನ್ನು ಮನೆಯಿಂದ ಹೊರ ಹಾಕಿದರು.
ಏನೂ ಮಾಡಲು ತೋಚದ ವಿಶಾಲ್ ಇತ್ತ ಮನೆಗೂ ತೆರಳಲಾಗದೆ ದೆಹಲಿಯಲ್ಲಿನ ದ್ವಾರಕದ ಉದ್ಯಾನವನದಲ್ಲಿ ಉಳಿದುಕೊಂಡ. ಹಲವು ದಿನಗಳ ಕಾಲ ಅದೇ ಉದ್ಯಾನವನದಲ್ಲಿ ಉಳಿದು ಕೊಂಡು ಅಲ್ಲಿದ್ದ ಬೀದಿ ನಾಯಿಗಳ ಜತೆ ಕಾಲ ಕಳೆದಿದ.
ಲಾಕ್ ಡೌನ್ ಸಮಯದಲ್ಲಿ ಒಬ್ಬನೇ ಉದ್ಯಾನವನದಲ್ಲಿ ಕಾಲ ಕಳೆಯುತ್ತಿದ್ದ ಹುಡುಗನನ್ನು ನೋಡಿದ ಉದ್ಯಾನವನದ ಪಕ್ಕದ ನಿವಾಸಿ ಸ್ನೇಹ ಎಂಬ ಮಹಿಳೆ ವಿಶಾಲ್ ನ ಪೂರ್ವಪರ ವಿಚಾರಿಸಿದ್ದು, ದಿನನಿತ್ಯ ಊಟ ತಿಂಡಿಯ ವ್ಯವಸ್ಥೆ ಮಾಡಿದರು. ಏನಾದರೂ ಮಾಡಿ ವಿಶಾಲ್ ನನ್ನು ತಂದೆ ತಾಯಿಯ ಜೊತೆ ಸೇರಿಸಬೇಕು ಎಂದು ಯೋಚಿಸಿದ ಸ್ನೇಹ ಬಾಲಕನ ವೃತ್ತಾಂತವನ್ನು ಬರೆದು ಫೋಟೋ ಸಮೇತ ತನ್ನ ಟ್ವಿಟರ್ ಖಾತೆಗೆ ಹಾಕಿ @ indiacares_2020 ಎಂಬ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯೊಂದಕ್ಕೆ ಟ್ಯಾಗ್ ಮಾಡಿದರು.
ಈ ಟ್ವೀಟ್ ಅಲ್ಲಿನ ಐಪಿಎಸ್ ಅಧಿಕಾರಿ ಅರುಣ್ ಭೋಥ್ರ ಎಂಬವರ ಗಮನಕ್ಕೆ ಬಂದಿದ್ದು, ಅವರು ತನ್ನ ಬ್ಯಾಚ್ ಮೇಟ್ ಬಿಹಾರ್ ವಲಯದ ಅಧಿಕಾರಿ ಸಂಜಯ್ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಅನಂತರ ಅವರು ಸಮಿಸ್ತಾಪುರದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಅವರು ವಿಶಾಲ್ ಹೆತ್ತವರನ್ನು ಪತ್ತೆ ಹಚ್ಚಿ ಚಾಲ್ತಿಯಲ್ಲಿದ್ದ ವಿಶೇಷ ರೈಲಿನಲ್ಲಿ ದೆಹಲಿಗೆ ಕಳುಹಿಸಿ ಕೊಡಲಾಯಿತು. ಹೀಗೆ ಟ್ವಿಟರ್ ನಲ್ಲಿ ಮಾಡಿದ ಒಂದು ಟ್ವೀಟ್ ಬೇರ್ಪಟ್ಟ ಮಗನನ್ನು ಹೆತ್ತವರ ಜೊತೆ ಸೇರಿಸಿತು.








