ಬೆಂಗಳೂರು: ಮಹಿಳೆಯೊಬ್ಬಳು ಮದುವೆಯಾದ ನಂತರ ವಂಚಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಫೇಸ್ಬುಕ್ನಲ್ಲಿ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಮದುವೆಯ ನಾಟಕವಾಡಿ ವಂಚಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿಯ ಪತಿ, ಮೊದಲ ಮದುವೆ ಮುಚ್ಚಿಟ್ಟು ವಂಚನೆ ಮಾಡುವುದಕ್ಕಾಗಿಯೇ ಅವಳ ಸಂಬಂಧಿಕರು ನನ್ನೊಂದಿಗೆ ಮದುವೆ ಮಾಡಿದ್ದಾರೆ ಎಂದು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೇಸ್ ಬುಕ್ನಲ್ಲಿ ಮಹಿಳೆ ಪರಿಚಯ ಮಾಡಿಕೊಂಡಿದ್ದ ಸಂತೋಷ್, 2018 ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿಯೇ ಆಕೆಗೂ ಕೆಲಸ ಕೊಡಿಸಿದ್ದ. ನಂತರ ಇಬ್ಬರ ಮಧ್ಯೆ ಪ್ರೇಮ ಚಿಗುರೊಡೆದಿದೆ. ಆ ನಂತರ ಇಬ್ಬರೂ ಮದುವೆಗೆ ಮುಂದಾಗಿದ್ದಾರೆ. ಮದುವೆ ಮಾಡಿಸಲು ಮಹಿಳೆಯ ಅಕ್ಕ-ಭಾವ ಮುಂದೆ ಬಂದಿದ್ದಾರೆ.
ಹೀಗಾಗಿ ಚಿನ್ನದ ಆಭರಣ ಮಾಡಿಸುವಂತೆ ಮಹಿಳೆಯ ಅಕ್ಕ ಸಂತೋಷ್ಗೆ ಹೇಳಿದ್ದಲ್ಲದೆ, ಮದುವೆಗೆ ಮುಂಚೆ ಐಫೋನ್ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾಳೆ. ಸಂತೋಷ್ 2.60 ಲಕ್ಷ ಮೌಲ್ಯದ ಎರಡು ಐಫೋನ್ ಕೊಡಿಸಿದ್ದಾರೆ. ಹಣ, ಆಭರಣ, ಮೊಬೈಲ್ ಫೋನ್ ಕೊಡಿಸುವುದರೊಂದಿಗೆ 2022ರಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಮದುವೆ ಕೂಡ ಮಾಡಲಾಗಿತ್ತು. ಆದರೆ, ಮೂರೇ ತಿಂಗಳಲ್ಲಿ ಸಂತೋಷ್ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಫೋನ್ ಸೇರಿದಂತೆ ಲಕ್ಷಾಂತರ ರೂ. ವಂಚಿಸಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಸಂತೋಷ್ ಆರೋಪಿಸಿದ್ದಾರೆ.
ಸದ್ಯ ಪೊಲೀಸರು ಮೂವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.