ಹುಬ್ಬಳ್ಳಿ: ಮತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಜ್ಞಾವಂತರು ಹಾಗೂ ವಿದ್ಯಾವಂತರು ಮತದಾನದಿಂದ ದೂರವೇ ಉಳಿಯುತ್ತಿದ್ದಾರೆ. ಆದರೆ, ಯುವತಿಯೊಬ್ಬರು ಮತ ಹಾಕುವುದಕ್ಕಾಗಿಯೇ ಅಮೆರಿಕದಿಂದ (America) ಹುಬ್ಬಳ್ಳಿಗೆ (Hubballi) ಆಗಮಿಸಿದ್ದಾರೆ.
ನಗರದ ನಿವಾಸಿ ಬಸವರಾಜ ಆಲೂರ ಅವರ ಪುತ್ರಿ ರುಚಿತಾ ಎಂಬುವವರೇ ಅಮೆರಿಕದಿಂದ ಬಂದು ತಮ್ಮ ಹಕ್ಕು ಚಲಾಯಿಸಿ, ಯುವ ಮತದಾರರಿಗೆ ಮಾದರಿಯಾಗಿದ್ದಾರೆ. ರುಚಿತಾ ಅವರಿಗೆ ಇದೇ ಮೊದಲ ಬಾರಿಗೆ ಮತದಾನ ಮಾಡುವ ಹಕ್ಕು ಬಂದಿತ್ತು. ಇದರಿಂದ ವಂಚಿತವಾಗಬಾರದು ಎಂಬ ದೃಷ್ಟಿಯಿಂದ ರುಚಿತಾ ಅಮೆರಿಕದಿಂದ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರುಚಿತಾ, ನನ್ನ ಮೊದಲ ಮತದಾನ ಮಾಡಬೇಕೆಂಬ ಆಸೆಯಿಂದ ನಾನು ಅಮೆರಿಕದಿಂದ ಬಂದೆ. ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ತಂದೆ-ತಾಯಿ ಸಹಕಾರದಿಂದ ಹಕ್ಕು ಚಲಾಯಿಸಿದ್ದೇನೆ. ಈ ಮೂಲಕ ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ, ಎಲ್ಲರಿಗೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.