ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಆಧುನಿಕ ಭಗೀರಥ ಅಮೈ ಮಹಾಲಿಂಗ ನಾಯ್ಕ್
ಮಂಗಳೂರು: ಆಧುನಿಕ ಭಗೀರಥ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಪ್ರಶಸ್ತಿ ಸಮಾರಂಭಕ್ಕೆ ತುಳುನಾಡಿನ ಕೃಷಿಕರ ಕಿರೀಟ ಮುಟ್ಟಾಲೆಯನ್ನು ಧರಿಸಿ ಆಗಮಿಸಿದ್ದರು. ಮುಟ್ಟಾಲೆಯನ್ನು ಧರಿಸಿಯೇ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ಸ್ವೀಕರಿಸಿದರು. ಇವರು ಸುರಂಗ ಕೊರೆದು ನೀರು ಹುಡುಕಾಟ ನಡೆಸಿ ಬೋಳುಗುಡ್ಡೆದ ಬಾಯಾರಿಕೆ ನೀಗಿಸಿದ ‘ಆಧುನಿಕ ಭಗೀರಥ’.
ಪ್ರಶಸ್ತಿ ಸ್ವೀಕರಿಸಲು ಮಹಾಲಿಂಗ ನಾಯ್ಕ್ ಅವರು ತಮ್ಮ ಮೊಮ್ಮಗನೊಂದಿಗೆ ಭಾನುವಾರ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಪ್ರಯಾಣಕ್ಕೂ ಮುನ್ನ ದ.ಕ.ಜಿಲ್ಲಾಧಿಕಾರಿಯವರು ಅಮೈ ಮಹಾಲಿಂಗ ನಾಯ್ಕ್ ಅವರ ಯೋಗಕ್ಷೇಮ ವಿಚಾರಿಸಿದ್ದರು. ಪ್ರಯಾಣದ ಕ್ಯಾಬ್ ಹಾಗೂ ವಿಮಾನ ಯಾನ ದರವನ್ನು ಸರ್ಕಾರವೇ ಭರಿಸಿತ್ತು.
ಬೆಳಗ್ಗೆ 11.15ಕ್ಕೆ ವಿಮಾನ ಏರಿದ ಮಹಾಲಿಂಗ ನಾಯ್ಕ್ ಅವರು, ಬೆಂಗಳೂರು ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಸಂಜೆ 6ಕ್ಕೆ ದಿಲ್ಲಿ ತಲುಪಿದ ಅವರು ಅಶೋಕ ಹೊಟೇಲ್ನಲ್ಲಿ ತಂಗಿದ್ದರು.
ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, ‘ಪ್ರಧಾನಿ ಮೋದಿಯವರು ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಮಾತನಾಡಿದೆ. ಹಿಂದಿ ಭಾಷೆ ಗೊತ್ತಿಲ್ಲದ ಕಾರಣ ನಾನು ಮರಾಠಿ ಭಾಷೆಯಲ್ಲಿ ಮಾತನಾಡಿದೆ. ಅವರ ಮಾತುಗಳನ್ನು ಅವರ ಭಾವದಿಂದಲೇ ಅರ್ಥೈಸಿಕೊಂಡೆ.
ಈ ಬಗ್ಗೆ ನನಗೆ ಅತೀವ ಸಂತೋಷವಿದೆ. ಇಂದು ದೆಹಲಿಯಲ್ಲಿ ವಿವಿಧ ಪ್ರವಾಸಿತಾಣಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಸಂಜೆ ವೇಳೆಗೆ ತವರಿಗೆ ಹೊರಡಲು ವಿಮಾನದ ವ್ಯವಸ್ಥೆಯನ್ನು ಸರ್ಕಾರ ಮಾಡಿದ್ದು, ಮಾ.30ರಂದು ಮಂಗಳೂರು ತಲುಪಲಿದ್ದೇನೆ ಎಂದರು.