ಚೀನಾ ಕಂಪೆನಿಗಳ ರಾಯಭಾರಿ ಒಪ್ಪಂದವನ್ನು ಬಾಲಿವುಡ್ ನಟ ನಟಿಯರು ಬಹಿಷ್ಕರಿಸುತ್ತಾರಾ ?
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಈಗ ಬೆಂಕಿ ಹಚ್ಚಿಕೊಂಡಿದೆ. ಸಣ್ಣ ಸಮಸ್ಯೆಯೊಂದು ಇದೀಗ ಯುದ್ಧದ ಕರಿಛಾಯೆಯನ್ನೇ ಮೂಡಿಸಿದೆ. ಚೀನಾದ ಕುತಂತ್ರದಿಂದ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಶಾಂತವಾಗಿದ್ದ ಚೀನಾ ಮತ್ತು ಭಾರತ ಗಡಿ ಭಾಗದಲ್ಲಿ ಈಗ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಇದೀಗ ಚೀನಾದ ವ್ಯವಸ್ಥಿತ ಪಿತೂರಿ ವಿರುದ್ಧ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಅಲ್ಲದೆ ಚೀನಾದ ಉತ್ಪನ್ನಗಳನ್ನು ಬ್ಯಾನ್ ಮಾಡಿ ಅಂತ ಅಭಿಯಾನವೂ ಶುರುವಾಗಿದೆ. ಚೀನಾ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಚೀನಾದ ನರಿ ಬುದ್ದಿಯಿಂದ ಸದ್ಯ ದೇಶದಲ್ಲಿ ಸ್ವದೇಶಿ ಮಂತ್ರ ಮೊಳಗುತ್ತಿದೆ.
ಈ ನಡುವೆ ಚೀನಾ ಮೂಲದ ಕೆಲವೊಂದು ಪ್ರತಿಷ್ಠಿತ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಭಾರತದ ಸೆಲೆಬ್ರಿಟಿಗಳನ್ನು ರಾಯಾಭಾರಿಗಳನ್ನಾಗಿ ಮಾಡಿಕೊಂಡಿದೆ. ಇದ್ರಲ್ಲಿ ಬಾಲಿವುಡ್ ನಟ ನಟಿಯರೂ ಇದ್ದಾರೆ. ಇನ್ನೊಂದೆಡೆ ಪ್ರತಿಷ್ಠಿತ ಐಪಿಎಲ್ ಟೂರ್ನಿಯ ಪ್ರಾಯೋಜಕತ್ವವನ್ನು ವಿವೋ ಕಂಪೆನಿಯು ಬಿಸಿಸಿಐ ಜೊತೆ ಐದು ವರ್ಷಗಳ ತನಕ ಒಪ್ಪಂದ ಮಾಡಿಕೊಂಡಿದೆ.
ಇನ್ನೊಂದೆಡೆ ಬಾಲಿವುಡ್ ನಟ -ನಟಿಯರು ಚೀನಾ ಕಂಪೆನಿಗಳ ರಾಯಭಾರಿಯಿಂದ ಹೊರಬರುತ್ತಾರಾ ? ಚೀನಾ ಉತ್ಪನ್ನಗಳನ್ನು ಭಾರತದಲ್ಲಿ ನಿಷೇಧಿಸುವ ಅಭಿಯಾನಕ್ಕೆ ಸಾಥ್ ಕೊಡ್ತಾರಾ ಅನ್ನೋ ಪ್ರಶ್ನೆಗಳು ಎಲ್ಲಾ ಕೇಳಿ ಬರುತ್ತಿವೆ. ಆದ್ರೆ ಸೆಲೆಬ್ರೆಟಿಗಳು, ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ಆಟಗಾರರು, ಬಿಸಿಸಿಐ ಹೀಗೆ ಚೀನಾ ಕಂಪೆನಿಗಳ ರಾಯಭಾರಿಯನ್ನು ಬಹಿಷ್ಕಾರ ಮಾಡಲು ಕೇಂದ್ರ ಸರ್ಕಾರದ ನಿರ್ಧಾರ ಮೇಲೆ ನಿರ್ಧಾರವಾಗುತ್ತದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಅಭಿಯಾನಕ್ಕೆ ಸಾಥ್ ಕೊಟ್ರೆ ಅನಿವಾರ್ಯವಾಗಿ ಸೆಲೆಬ್ರಿಟಿಗಳು ತಮ್ಮ ಬ್ರ್ಯಾಂಡ್ ಅಂಬಾಸೀಡರ್ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ.
ಆದ್ರೆ ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಿ ಅನ್ನೋ ಅಭಿಯಾನಕ್ಕೆ ಸೆಲೆಬ್ರೆಟಿಗಳು ಬೆಂಬಲ ನೀಡ್ತಾರೆ ಅನ್ನೋದು ದೂರದ ಮಾತೇ ಸರಿ. ಅಷ್ಟಕ್ಕೂ ಬಾಲಿವುಡ್‍ನ ಯಾವ ಯಾವ ನಟ -ನಟಿಯರು ಯಾವ ಯಾವ ಚೀನಾದ ಮೊಬೈಲ್ ಕಂಪೆನಿಗಳಿಗೆ ರಾಯಭಾರಿಗಳಾಗಿದ್ದಾರೆ ಎಂಬುದರ ವಿವರ ಹೀಗಿದೆ.
ಅಮೀರ್‍ಖಾನ್ – ಬಾಲಿವುಡ್‍ನ ಪ್ರತಿಭಾನ್ವಿತ ನಟ, 20018ರಿಂದ ಚೀನಾ ಮೂಲದ ವಿವೋ ಮೊಬೈಲ್‍ಗೆ ಬ್ರ್ಯಾಂಡ್ ಅಂಬಾಸೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಣವೀರ್ ಸಿಂಗ್ – ಬಾಲಿವುಡ್‍ನ ಇನ್ನೊಬ್ಬ ನಟ ರಣವೀರ್ ಸಿಂಗ್ ಅವರು ರೆಡ್ ಮಿ ಮೊಂಬೈನ ರಾಯಭಾರಿಯಾಗಿದ್ದಾರೆ.
ರಣಬೀರ್ ಕಪೂರ್, ಕತ್ರಿನಾ ಕೈಫ್- ಚೀನಾ ಮೂಲದ ಒಪ್ಪೋ ಮೊಬೈಲ್ ಕಂಪೆನಿಯ ಬ್ರ್ಯಾಂಡ್ ಅಂಬಾಸೀಡರ್.
ಸಲ್ಮಾನ್ ಖಾನ್ – ಬಾಲಿವುಡ್ ಚಿರ ಯುವಕ. ರಿಯಲ್ ಮಿ ಅನ್ನೋ ಚೀನಾ ಮೂಲದ ಮೊಬೈಲ್ ಕಂಪೆನಿಯ ರಾಯಭಾರಿಯಾಗಿದ್ದಾರೆ.
ಶ್ರದ್ಧ ಕಪೂರ್. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಕಳೆದ ಮಾರ್ಚ್ ನಿಂದ ರಿಯಲ್ ಮಿ ಸ್ಮಾರ್ಟ್ ಫೋನ್‍ಗಳಿಗೆ ರಾಯಭಾರಿಯಾಗಿದ್ದಾರೆ.
ಹೀಗೆ ಬಾಲಿವುಡ್ ನಟ -ನಟಿಯರು ಭಾರತದಲ್ಲಿ ಚೀನಾ ಮೂಲದ ಕಂಪೆನಿಗಳಿಗೆ ಬ್ರ್ಯಾಂಡ್ ಅಂಬಾಸೀಡರ್ ಆಗಿದ್ದಾರೆ. ಆದ್ರೆ ಇವರೆಲ್ಲರೂ ಚೀನಾ ಕಂಪೆನಿಗಳ ಜೊತೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಗೊಳಿಸಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಅಭಿಯಾನಕ್ಕೆ ಕೈ ಜೋಡಿಸ್ತಾರಾ ?