ಬೆಂಗಳೂರು: ಅಯೋಡಿನ್ ನಮ್ಮ ದೇಹಕ್ಕೆ ಅಗತ್ಯ ಎಂದು ತಿಳಿದಿರುವುದು ಒಂದು ವಿಚಾರವಾದರೆ, ಸೂಕ್ತ ಪ್ರಮಾಣದ ಅಯೋಡಿನ್ ಇರುವ ಉಪ್ಪನ್ನು ಗುರುತಿಸುವುದು, ಅದನ್ನು ಸರಿಯಾಗಿ ಶೇಖರಿಸಿಡುವುದು ಹಾಗೂ ಅಡುಗೆಯಲ್ಲಿ ಬಳಸುವುದು ಹೇಗೆ ಎಂಬುದು ಮತ್ತೊಂದು ವಿಚಾರ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರಾಯೋಗಿಕ ಅರಿವು ಮೂಡಿಸುವಲ್ಲಿ ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮ (ಎಎಸ್ಐಪಿ) ಭಾರಿ ಯಶಸ್ಸು ಕಂಡಿದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ 32 ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ಈ ಬೃಹತ್ ಅಭಿಯಾನದಲ್ಲಿ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಹದಿಹರೆಯದವರು ಪಾಲ್ಗೊಂಡಿದ್ದರು. ‘ಜಾಗತಿಕ ಅಯೋಡಿನ್ ಕೊರತೆ ಅಸ್ವಸ್ಥತೆಗಳ ತಡೆಗಟ್ಟುವಿಕೆ ದಿನ’ದ (ಅಕ್ಟೋಬರ್ 21) ಹಿನ್ನೆಲೆಯಲ್ಲಿ ಬಿಡುಗಡೆಯಾದ 2025-26ರ ಅಂತ್ಯದ ವರದಿಯ ಪ್ರಕಾರ, ಈ ಕಾರ್ಯಕ್ರಮದಿಂದಾಗಿ ಜನರ ಒಟ್ಟಾರೆ ಅಯೋಡಿನ್ ಜ್ಞಾನದಲ್ಲಿ ಶೇ. 37ರಷ್ಟು ಹಾಗೂ ಮೂಲಭೂತ ಅರಿವಿನಲ್ಲಿ ಶೇ. 26ರಷ್ಟು ಗಣನೀಯ ಏರಿಕೆಯಾಗಿದೆ.
ಬರೀ ಭಾಷಣವಲ್ಲ, ಪ್ರಾಯೋಗಿಕ ಶಿಕ್ಷಣ
ಅಯೋಡಿನ್ ಏಕೆ ಮುಖ್ಯ ಎಂದು ಹೇಳುವುದರ ಜೊತೆಗೆ, ಪ್ಯಾಕ್ ಮಾಡಿದ ಉಪ್ಪಿನಲ್ಲಿ ಅಯೋಡಿನ್ ಇದೆಯೇ ಎಂದು ಗುರುತಿಸುವುದು ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದನ್ನು ಜನರಿಗೆ ಕಲಿಸಲಾಗಿದೆ. ಇದಕ್ಕಾಗಿ ‘ಅಯೋಡಿನ್ ಸಭೆ’ಗಳು, ಬೀದಿ ನಾಟಕಗಳು ಹಾಗೂ ಶಾಲಾ ಚಟುವಟಿಕೆಗಳನ್ನು ಬಳಸಿಕೊಳ್ಳಲಾಗಿದೆ.
10 ಲಕ್ಷಕ್ಕೂ ಹೆಚ್ಚು ಜನರು ಅಯೋಡಿನ್ ಸಭೆಗಳಲ್ಲಿ ಪಾಲ್ಗೊಂಡರೆ, 3.22 ಲಕ್ಷ ಜನರನ್ನು ಬೀದಿ ನಾಟಕಗಳ ಮೂಲಕ ತಲುಪಲಾಗಿದೆ. 1,712 ಆಶಾ/ಅಂಗನವಾಡಿ ಕಾರ್ಯಕರ್ತೆಯರು ಹಾಗೂ 178 ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.
ಸ್ಥಳೀಯ ಮಹಿಳೆಯರನ್ನೇ ‘ಅಯೋಡಿನ್ ಚಾಂಪಿಯನ್’ಗಳಾಗಿ ರೂಪಿಸಿ, ಜಾಗೃತಿಯು ಮನೆಮನೆ ತಲುಪುವಂತೆಯೂ ಮಾಡಲಾಗಿದೆ.
ಈ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಐಟಿಸಿ ಲಿಮಿಟೆಡ್ನ ಬ್ಯುಸಿನೆಸ್ ಯುನಿಟ್ ಚೀಫ್ ಎಕ್ಸಿಕ್ಯೂಟಿವ್ ಅನುಜ್ ರುಸ್ತಗಿ, “ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ಸ್ಥಳೀಯ ಭಾಷೆಯಲ್ಲಿ ವೈಜ್ಞಾನಿಕ ಮಾಹಿತಿಯನ್ನು ನಿರಂತರವಾಗಿ ನೀಡಿದಾಗ, ಅದು ಅವರ ದೈನಂದಿನ ಆಚರಣೆಯಾಗಿ ಬದಲಾಗುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಮಹಿಳೆಯರು, ಶಾಲಾ ಮಕ್ಕಳು, ಶಿಕ್ಷಕರು ಮತ್ತು ಮುಂಚೂಣಿ ಕಾರ್ಯಕರ್ತರು ಈ ಸಂದೇಶವನ್ನು ಸಮುದಾಯದ ಆಳಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ,” ಎಂದರು.
“ಗರ್ಭಾವಸ್ಥೆ ಮತ್ತು ಬಾಲ್ಯದಲ್ಲಿ ಅಯೋಡಿನ್ ಕೊರತೆಯು ಮಕ್ಕಳ ಬೆಳವಣಿಗೆ ಮತ್ತು ಬುದ್ಧಿಮತ್ತೆಯ ಮೇಲೆ ಸರಿಪಡಿಸಲಾಗದ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಅಯೋಡಿನ್ ಬಗ್ಗೆ ಕೇವಲ ಮಾಹಿತಿ ನೀಡಿದರೆ ಸಾಲದು, ಅಡುಗೆ ಮಾಡುವಾಗ ಉಪ್ಪನ್ನು ಸರಿಯಾಗಿ ಬಳಸುವ ಪ್ರಾಯೋಗಿಕ ಜ್ಞಾನವೂ ಕುಟುಂಬಗಳಿಗೆ ಅತ್ಯಗತ್ಯ,” ಎಂದು ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ನಿರ್ದೇಶಕ ಡಾ. ಶಂತನು ಅಭಿಪ್ರಾಯಟ್ಟಿದ್ದಾರೆ.
“ಕೆಲವು ರಾಜ್ಯಗಳಲ್ಲಿ ಇಂದಿಗೂ ಅಯೋಡಿನ್ ಯುಕ್ತ ಉಪ್ಪಿನ ಬಳಕೆ ಕಡಿಮೆಯಿದೆ. ಜನರು ಉಪ್ಪನ್ನು ಕಡಿಮೆ ತಿನ್ನಬೇಕು (ದಿನಕ್ಕೆ ಗರಿಷ್ಠ 5 ಗ್ರಾಂ), ಆದರೆ ತಿಂದ ಉಪ್ಪು ಅಯೋಡಿನ್ ಯುಕ್ತವಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು,” ಎನ್ನುತ್ತಾರೆ ಸಾರ್ವಜನಿಕ ಆರೋಗ್ಯ ಮತ್ತು ಪೌಷ್ಟಿಕಾಂಶ ತಜ್ಞ ಡಾ. ರಂಜನ್ ಶಂಕರ್.
ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಸಹಯೋಗದಲ್ಲಿ ಆಯೋಜಿಸಿದ್ದ “ಅಯೋಡಿನ್ ಯುಕ್ತ ಉಪ್ಪಿನೊಂದಿಗೆ ಬಲವಾದ ಮನಸ್ಸುಗಳು ಮತ್ತು ಆರೋಗ್ಯಕರ ಸಮುದಾಯಗಳ ನಿರ್ಮಾಣ” ಎಂಬ ವೆಬಿನಾರ್ನಲ್ಲಿ ಈ ಮಹತ್ವದ ಸಮೀಕ್ಷೆಯ ವರದಿಯನ್ನು ಮಂಡಿಸಲಾಯಿತು. ಭಾರತ ಸರ್ಕಾರದ ‘ರಾಷ್ಟ್ರೀಯ ಅಯೋಡಿನ್ ಕೊರತೆ ನಿಯಂತ್ರಣ ಕಾರ್ಯಕ್ರಮ’ದ (ಎಐಡಿಡಿಸಿಪಿ) ಉದ್ದೇಶಗಳಿಗೆ ಆಶೀರ್ವಾದ್ನ ಈ ಅಭಿಯಾನವು ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.








