ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ನವೆಂಬರ್ 1ರಂದು ಪ್ರತಿಭಟನೆ ನಡೆಸುವ ವಿಚಾರದಲ್ಲಿಯೂ ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ನಿರ್ದಿಷ್ಟ ದಿನಾಂಕದಂದು ಪ್ರತಿಭಟನೆ ನಡೆಸಬೇಡಿ ಎಂದು ಮನವಿ ಮಾಡಿದರೂ ಕಾಂಗ್ರೆಸ್ ಹಠಮಾರಿತನ ಪ್ರದರ್ಶಿಸುತ್ತಿದೆ. ಇದರಿಂದ ಪ್ರಜಾಪ್ರಭುತ್ವದ ಮೇಲೆ ಕಾಂಗ್ರೆಸ್ಗೆ ನಂಬಿಕೆ ಕಳೆದುಹೋಗಿರುವುದು ಸ್ಪಷ್ಟವಾಗುತ್ತದೆ. ದೇಶದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ನ್ಯಾಯಾಲಯಗಳಿವೆ. ಆದರೆ ಕಾಂಗ್ರೆಸ್ಗೆ ಆದಾಯ ತೆರಿಗೆ ಇಲಾಖೆ ಸರಿಯಿಲ್ಲ, ಜಾರಿ ನಿರ್ದೇಶನಾಲಯ ಸರಿಯಿಲ್ಲ, ಸಿಬಿಐ ಸರಿಯಿಲ್ಲ, ಚುನಾವಣಾ ಆಯೋಗ ಸರಿಯಿಲ್ಲ, ಕೊನೆಗೆ ನ್ಯಾಯಾಲಯಗಳೂ ಸರಿಯಿಲ್ಲ. ಹಾಗಾದರೆ ಈ ದೇಶದ ಯಾವ ಸಾಂವಿಧಾನಿಕ ಸಂಸ್ಥೆಗಳು ಕಾಂಗ್ರೆಸ್ ದೃಷ್ಟಿಯಲ್ಲಿ ಸರಿಯಾಗಿವೆ? ತಮ್ಮ ಸೋಲಿಗೆ ಪ್ರತಿಯೊಂದು ಸಂಸ್ಥೆಯನ್ನೂ ಹೊಣೆ ಮಾಡುವ ಬದಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿ ಎಂದು ಆರ್.ಅಶೋಕ ಹೇಳಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ವಿರೋಧ ಪಕ್ಷದ ನಾಯಕರು, ನ್ಯಾಯಾಧೀಶರು ಮತ್ತು ಪತ್ರಕರ್ತರನ್ನು ಜೈಲಿಗೆ ಹಾಕಿದ ಇತಿಹಾಸ ನಿಮ್ಮದಾಗಿದೆ. ಅಂತಹ ಹಿನ್ನೆಲೆಯುಳ್ಳ ಕಾಂಗ್ರೆಸ್ನಿಂದ ನಾವು ಇಂದು ಪ್ರಜಾಪ್ರಭುತ್ವದ ಪಾಠ ಕಲಿಯಬೇಕೇ? 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನೂ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸಿದ್ದೇನೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದಾಗ ಜನರು ಅನುಭವಿಸುವ ನೋವು ಮತ್ತು ಸಂಕಷ್ಟಗಳ ಬಗ್ಗೆ ನನಗೆ ನೇರ ಅನುಭವವಿದೆ ಎಂದರು.
ಇಂದು ದೇಶದ ಮುಂದೆ ಇರುವ ಪ್ರಮುಖ ಸಂಕಲ್ಪವೆಂದರೆ ಸಂವಿಧಾನವನ್ನು ರಕ್ಷಿಸುವುದು, ಜನರ ತೀರ್ಪಿಗೆ ಗೌರವ ನೀಡುವುದು, ಪ್ರಜಾಪ್ರಭುತ್ವವನ್ನು ಉಳಿಸುವುದು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು. ಇದೇ ಉದ್ದೇಶದಿಂದ ಬಿಜೆಪಿ ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿಯೂ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಲ್ಲ, ತನ್ನ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ಕಾಂಗ್ರೆಸ್ ಪಕ್ಷ ಇಂದು ಐಸಿಯುನಲ್ಲಿದೆ. ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎದೆ ಬಡಿದುಕೊಂಡು ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಇಂತಹ ಪ್ರತಿಭಟನೆಗಳಿಂದ ತನ್ನ ರಾಜಕೀಯ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲಾ ವಿಚಾರಗಳನ್ನು ಇಂದು ರಾಜ್ಯದ ಜನತೆಯ ಮುಂದಿಡುತ್ತಿದ್ದೇನೆ ಎಂದು ಆರ್.ಅಶೋಕ ಹೇಳಿದರು.








