ಎಬಿಡಿ ಸೇರಿದಂತೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಐಪಿಎಲ್‍ನಲ್ಲಿ ಆಡುತ್ತಿಲ್ಲ…?
ಎಬಿಡಿ ವಿಲಿಯರ್ಸ್, ಡೇಲ್ ಸ್ಟೇನ್, ಕ್ವಿಂಟನ್ ಡಿ ಕಾಕ್ ಸೇರಿದಂತೆ 9 ಮಂದಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಈ ಬಾರಿಯ ಐಪಿಎಲ್‍ನಿಂದ ವಂಚಿತರಾಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿರುವುದರಿಂದ ಅಲ್ಲಿ ಲಾಕ್ ಡೌನ್ ಮಾಡಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕೂ ನಿರ್ಬಂಧವನ್ನು ಹೇರಲಾಗಿದೆ. ಇದ್ರಿಂದ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇ ನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗುವುದು ಅನುಮಾನವಾಗಿದೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಕೂಡ ಕಳೆದ ನಾಲ್ಕೈದು ತಿಂಗಳುಗಳಿಂದ ಮನೆಯಲ್ಲೇ ಇದ್ದಾರೆ. ಲಾಕ್‍ಡೌನ್ ಮತ್ತು ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ಮನೆಯಿಂದ ಹೊರಗಡೆ ಬರೋಕೆ ಆಗುತ್ತಿಲ್ಲ. ಈ ನಡುವೆ ಇಮ್ರಾನ್ ತಾಹೀರ್ ಮಾತ್ರ ಐಪಿಎಲ್‍ನಲ್ಲಿ ಆಡಲಿದ್ದಾರೆ. ಸದ್ಯ ಇಮ್ರಾನ್ ತಾಹೀರ್ ಅವರು ಪಾಕಿಸ್ತಾನದಲ್ಲಿದ್ದಾರೆ. ಹಾಗಾಗಿ ಅವರು ಕೆರೆಬಿಯನ್ ಲೀಗ್ ಮುಗಿದ ತಕ್ಷಣ ಐಪಿಎಲ್ ಟೂರ್ನಿಯನ್ನು ಆಡಲಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಈಗಾಗಲೇ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಕೆರೆಬಿಯನ್ ಲೀಗ್ ನಿಂದಲೂ ವಂಚಿತರಾಗಿದ್ದಾರೆ. ಕೆರೆಬಿಯನ್ ಲೀಗ್ ಆಗಸ್ಟ್ 18ರಿಂದ ಶುರುವಾಗಲಿದೆ. ಇನ್ನೊಂದೆಡೆ ಸೆಪ್ಟಂಬರ್ ವೇಳೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧವನ್ನು ಸಡಿಲಗೊಳಿಸಬಹುದು ಎಂಬ ನಂಬಿಕೆ ಇದೆ. ಆದ್ರೆ ಯಾವುದಕ್ಕೂ ಗ್ಯಾರಂಟಿ ಇಲ್ಲ.
ಇನ್ನೊಂದೆಡೆ ಐಪಿಎಲ್ ಫ್ರಾಂಚೈಸಿಗಳು ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ನೆರವು ನೀಡಲು ಮುಂದಾಗಬಹುದು. ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಪ್ರತ್ಯೇಕ ವಿಮಾನ ಸೌಲಭ್ಯಗಳನ್ನು ನೀಡಿ ಐಪಿಎಲ್ ನಲ್ಲಿ ಭಾಗಿಯಾಗುವಂತೆ ಮಾಡಬಹುದು. ಆದ್ರೆ ಇದಕ್ಕೆ ದಕ್ಷಿಣ ಆಫ್ರಿಕಾ ಸರ್ಕಾರದ ಅನುಮತಿ ಬೇಕು. ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಅವರು ದಕ್ಷಿಣ ಆಫ್ರಿಕಾ ಪರ ಗರಿಷ್ಠ ಮೊತ್ತಕ್ಕೆ ಹರಾಜು ಆಗಿದ್ದರು. ಅವರು 10 ಕೋಟಿ ರೂಪಾಯಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸೇಲ್ ಆಗಿದ್ದರು.
ಅದು ಅಲ್ಲದೆ ಐಪಿಎಲ್ ಆಟಗಾರರು ಜೈವಿಕ ಸುರಕ್ಷತೆಯೊಂದಿಗೆ ಆಡುತ್ತಿದ್ದಾರೆ. ಆಟಗಾರರು ಕ್ವಾರಂಟೈನ್‍ನಲ್ಲಿದ್ದುಕೊಂಡೇ ಅಭ್ಯಾಸ ನಡೆಸುತ್ತಾರೆ. ಹೀಗಾಗಿ ಫ್ರಾಂಚೈಸಿಗಳು ದಕ್ಷಿಣ ಆಫ್ರಿಕಾ ಆಟಗಾರರನ್ನು ಆಗಸ್ಟ್ ನಲ್ಲೇ ತಂಡದೊಳಗೆ ಸೇರಿಸಿಕೊಳ್ಳಬೇಕಾಗುತ್ತದೆ. ಕೋವಿಡ್-19 ಮಾರ್ಗಸೂಚಿಗಳನ್ನು ಆಟಗಾರರ ಹಿತಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು. ಒಂದು ವೇಳೆ ಐಪಿಎಲ್‍ಗೆ ದಕ್ಷಿಣ ಆಫ್ರಿಕಾ ಆಟಗಾರರು ಅಲಭ್ಯರಾದ್ರೆ ಆರ್‍ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ ದೊಡ್ಡ ಹೊಡೆತ ಬೀಳಲಿದೆ.
ಆರ್‍ಸಿಬಿ ತಂಡದ ಪರ ಎಬಿಡಿ ವಿಲಯರ್ಸ್, ಡೇಲ್ ಸ್ಟೇನ್, ಕ್ರಿಸ್ ಮೋರಿಸ್ ಆಡಲಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಲುಂಗಿ ಎನ್‍ಗಿಡಿ, ಫಾಪ್ ಡು ಪ್ಲೇಸಸ್ ಮತ್ತು ಇಮ್ರಾನ್ ತಾಹೀರ್ ಆಡಲಿದ್ದಾರೆ. ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ ತಂಡದ ಪರ, ಕಾಗಿಸೊ ರಬಡಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ, ಡೇವಿಡ್ ಮಿಲ್ಲರ್ ರಾಜಸ್ಥಾನ ರಾಯಲ್ಸ್ ಪರ ಹಾಗೂ ಹರ್ಡುಸ್ ವಿಲ್ಜೊನ್ ಅವರು ಕಿಂಗ್ಸ್ ಇಲೆವೆನ್ ತಂಡದ ಪರ ಆಡಲಿದ್ದಾರೆ.
ಒಟ್ಟಿನಲ್ಲಿ ಹಲವು ಅಡೆತಡೆಗಳ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಪ್ರಯತ್ನ ನಡೆಸುತ್ತಿದೆ. ಅದೇ ರೀತಿ ಐಪಿಎಲ್ ಟೂರ್ನಿಗಾಗಿ ಭಾರತ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಆಗಸ್ಟ್ 2ರಂದು ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.