ಚೆನ್ನಭೈರಾದೇವಿಯ ಸಲ್ಲೇಖನ ವೃತ, ಹಿರಿಯ ವೆಂಕಟಪ್ಪ ನಾಯಕನ ದೊಡ್ಡತನ ಹಾಗೂ ಇತಿಹಾಸ ಕೆಳದಿ ಅರಸರ ಕುರಿತಾಗಿ ನಮಗೆ ಹೇಳಿದ ತಪ್ಪು ಕಥೆಗಳು: Saakshatv Naavu kelada charitre episode7
ಮಲೆನಾಡು ಮತ್ತು ಕರಾವಳಿಯನ್ನು ಆಳಿದ ಇಕ್ಕೇರಿ ನಾಯಕರ ಚರಿತ್ರೆಯನ್ನು ಬರೆಯ ಬೇಕು ಎಂದರೆ ನನಗೆ ಅತ್ಯಂತ ಪ್ರಮುಖವಾಗಿ ಎದ್ದು ಕಾಣುವ ಹೆಸರು ಹಿರಿಯ ವೆಂಕಟಪ್ಪ ನಾಯಕ (1586 – 1629). 1565ರ ಐತಿಹಾಸಿಕ ರಕ್ಕಸಗಿ ತಂಗಡಗಿ ಯುದ್ಧದ ನಂತರ ಕರ್ನಾಟಕದಲ್ಲಿ ಉದ್ಭವಿಸಿದ ರಾಜಕೀಯ ಅಸ್ಥಿರತೆಯ ಪ್ರಯುಕ್ತ ದಕ್ಷಿಣ ಭಾರತದಲ್ಲಿ ವಿಜಯನಗರದ ಹಲವಾರು ಸಾಮಂತರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಾಚಿಕೊಂಡ ಗೇರುಸೊಪ್ಪದ ರಾಣಿ ಚೆನ್ನಭೈರದೇವಿ ಮತ್ತು ಇಕ್ಕೇರಿಯ ಹಿರಿಯ ವೆಂಕಟಪ್ಪ ನಾಯಕರ ಕಥೆಯೇ ರೋಚಕ. 16ನೇ ಶತಮಾನದ ಆದಿಯಲ್ಲಿ ಮಲೆನಾಡು, ಕರಾವಳಿಯ ಮತ್ತು ವಿಶೇಷವಾಗಿ ಪ್ರಮುಖ ನೌಕಾ ಬಂದರುಗಳನ್ನು ಹಿಡಿತದಲ್ಲಿ ಹಿಡಿದುಕೊಳ್ಳಲು ಪ್ರಾರಂಭವಾದ ಕದನ ಅಂತಿಮವಾಗಿ 17ನೇ ಶತಮಾನದ ಪ್ರಾರಂಭದಲ್ಲಿ ಅಂದರೆ 1606ರ ಮೊದಲ ಭಾಗದಲ್ಲಿ ಇಕ್ಕೇರಿಯ ಹಿರಿಯ ವೆಂಕಟಪ್ಪ ನಾಯಕರು ಗೇರುಸೊಪ್ಪದ ರಾಣಿ ಚೆನ್ನಭೈರದೇವಿಯ ಸಾಮ್ರಾಜ್ಯವನ್ನು ಸ್ವಾಧೀನ ಪಡಿಸಿಕೊಂಡ ನಂತರ ಸಮಾಪ್ತಿ ಆಗುತ್ತದೆ. Saakshatv Naavu kelada charitre episode7

ಹಿರಿಯ ವೆಂಕಟಪ್ಪ ನಾಯಕರು ತಮ್ಮ ಜೀವಿತಾವಧಿಯಲ್ಲಿ ಸಂಪೂರ್ಣ ಕರಾವಳಿಯನ್ನು (ಮಿರ್ಜಾನ ಇಂದ ಕೇರಳದ ನೀಲೇಶ್ವರದ ವರೆಗೂ) ಸ್ವಾಧೀನ ಪಡಿಸಿಕೊಂಡು ಪಶ್ಚಿಮ ಸಮುದ್ರದ ಒಡೆಯ (Lord of Western Sea) ಎಂದು ಬಿರುದು ತೆಗೆದುಕೊಂಡಿದ್ದು ಒಂದು ಕಡೆ ಆದರೆ ಇನ್ನೊಂದು ಕಡೆ ಇಕ್ಕೇರಿ ನಾಯಕರ ರಾಜ್ಯ ವಿಸ್ತಾರದ ನಿಮಿತ್ತ ಕರಾವಳಿಯಲ್ಲಿ ನಡೆದ ಹಲವಾರು ಯುದ್ಧದಲ್ಲಿ ಅನೇಕ ಸಣ್ಣಪುಟ್ಟ ಸಾಮಂತರು ಧೂಳೀಪಟ ಆಗಿ ಹೋಗುತ್ತಾರೆ, ನೋಡ ನೋಡುತ್ತಲೇ ಜೈನರ ಕೈ ಮುಷ್ಟಿಯಲ್ಲಿ ಇದ್ದ ಕರಾವಳಿ ವೀರಶೈವ ಧರ್ಮದ ಅನುಯಾಯಿಗಳಾಗಿದ್ದ ಇಕ್ಕೇರಿ ನಾಯಕರ ಪಾಲಾಗುತ್ತದೆ.
ರಾಜ್ಯ ವಿಸ್ತಾರಕ್ಕಾಗಿ ನಡೆದ ಎಲ್ಲಾ ಯುದ್ಧಗಳಂತೆಯೇ ಇಕ್ಕೇರಿ ನಾಯಕರ ಕರಾವಳಿ ವಿಸ್ತಾರ ಸಹಾ ಭಯಂಕರವಾಗಿತ್ತು. ಕರಾವಳಿಯ ಹಲವಾರು ಸಾಮಂತರ ವಂಶವೇ ನಿರ್ವಂಶ ಆದರೆ ಹಲವಾರು ಪ್ರಮುಖ ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಅಲ್ಲಿಯ ರಾಜನ ಹಿತೈಷಿಗಳು ತಮ್ಮ ಮನೆ, ಮಠ ಮತ್ತು ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತಾರೆ. ವೆಂಕಟಪ್ಪ ನಾಯಕರ ಯುದ್ಧ ನೀತಿಗೆ ತತ್ತರಿಸಿ ಹೋದ ಹೊಸಂಗಡಿ, ಕದರಿ, ಭಗ್ಗವಾಡಿ ಮತ್ತು ಕಳ್ಳೂರಿನ (Hosangadi, Kadari, Baggavadi & Kalluru) ಸಾಮಂತರು ತಮ್ಮ ರಾಜ್ಯಭಾರವನ್ನು ಕಳೆದುಕೊಳ್ಳುತ್ತಾರೆ.
ಸಂಪೂರ್ಣ ದಕ್ಷಿಣ ಕೆನರಾ ವೆಂಕಟಪ್ಪ ನಾಯಕರ ಪಾಲಾದರು ಅವರ ರಾಜ್ಯ ವಿಸ್ತರಣೆ ಕೊನೆಯ ಹಾಗೂ ಬಹಳ ಅವಶ್ಯಕವಾದ ಪ್ರದೇಶ ಇನ್ನೂ ಸಹಾ ಅವರ ಅಧೀನಕ್ಕೆ ಬಂದಿರಲಿಲ್ಲ ಅದುವೇ ಗೇರುಸೊಪ್ಪದ ವೀರರಾಣಿ ಚೆನ್ನಭೈರದೇವಿಯ ರಾಜ್ಯ. ಸ್ವಾಭಾವಿಕವಾಗಿ ಹಿರಿಯ ವೆಂಕಟಪ್ಪ ನಾಯಕರಿಗೆ ಗೇರುಸೊಪ್ಪದ ರಾಜ್ಯ ಯಾಕೆ ಅಷ್ಟು ಪ್ರಮುಖ ವಾಗಿತ್ತು ಅಂದರೆ ಗೇರುಸೊಪ್ಪ ಅಂದಿನ ಕಾಲದ ಅತ್ಯಂತ ಶ್ರೀಮಂತ ಹಾಗೂ ಪ್ರಮುಖ ವ್ಯಾಪಾರಿ ಕೇಂದ್ರ ವಾಗಿತ್ತು. 16ನೇ ಶತಮಾನದಲ್ಲಿ ಫೋರ್ಚುಗೀಸ್ ಹಾಗೂ ಇತರೆ ಐರೋಪ್ ದೇಶಗಳಲ್ಲಿ ಬಹು ಬೇಡಿಕೆ ಇದ್ದ ಕಾಳುಮೆಣಸು, ಏಲಕ್ಕಿ, ಅಕ್ಕಿ ಮತ್ತು ಉತ್ಕೃಷ್ಟ ದರ್ಜೆಯ ಮರಗಳನ್ನು ಅತಿ ಹೆಚ್ಚು ಬೆಳೆಯುತ್ತಿದ್ದ ಪ್ರದೇಶವನ್ನು ಆಳುತ್ತಿದ್ದ ರಾಣಿ ಚೆನ್ನಭೈರದೇವಿ ಇದರ ವಹಿವಾಟಿನ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ ಇದರ ಮೂಲಕ ಅಪಾರ ಪ್ರಮಾಣದ ಸಂಪತ್ತಿನ ಒಡತಿಯಾಗಿದ್ದಳು.

ಕರಾವಳಿ ಮತ್ತು ಪ್ರಮುಖವಾಗಿ ಕಾಳುಮೆಣಸಿನ ವ್ಯಾಪಾರವನ್ನು ಸ್ವಾಧೀನಪಡಿಸಿಕೊಳ್ಳಲು ಇಕ್ಕೇರಿ ಮತ್ತು ಗೇರುಸೊಪ್ಪದ ಮಧ್ಯದಲ್ಲಿ 1595ರಿಂದ ಪ್ರಾರಂಭವಾದ ಸರಣಿ ಯುದ್ಧಗಳು ಒಂದು ದಶಕದ ಕಾಲ ನಡೆದು ಅಂತಿಮವಾಗಿ 1606ರ ಮೊದಲ ಭಾಗದಲ್ಲಿ ರಾಣಿ ಚೆನ್ನಭೈರದೇವಿಯನ್ನು ಸೆರೆ ಹಿಡಿಯುವ ಮೂಲಕ ಹಿರಿಯ ವೆಂಕಟಪ್ಪ ನಾಯಕರು ವಿಜಯದ ನಗೆಯನ್ನು ಬೀರುತ್ತಾರೆ. ರಾಣಿ ಚೆನ್ನಭೈರದೇವಿಯ ರಾಜ್ಯ, ಪ್ರಮುಖ ನೌಕಾ ಬಂದರು ಹಾಗೂ ಕಾಳುಮೆಣಸಿನ ವ್ಯಾಪಾರ ಇಕ್ಕೇರಿ ನಾಯಕರ ವಶವಾದರೆ ಅವಳ ಭಂಡಾರದಲ್ಲಿ ಇದ್ದ ಅಪಾರ ಪ್ರಮಾಣದ ನಗ ನಾಣ್ಯಗಳು, ಅಮೂಲ್ಯವಾದ ಬೆಲೆ ಕಟ್ಟಲಾರದ ಸಂಪತ್ತು ಹಿರಿಯ ವೆಂಕಟಪ್ಪ ನಾಯಕರ ಖಜಾನೆ ಸೇರುತ್ತದೆ. 16ನೇ ವಯಸ್ಸಿನಲ್ಲಿ ರಾಣಿಯಾಗಿ 54 ವರ್ಷಗಳ ಕಾಲ ಸುದೀರ್ಘವಾಗಿ ರಾಜ್ಯಭಾರ ಮಾಡಿದ ಈ ರಾಣಿಗೆ ಫೋರ್ಚುಗೀಸ್ ಅವರು “ರೈನಾ ಡಿ ಪಿಮೆಂಟಾ” (Raina De Pimenta) ಎಂದು ಕರೆದರು. 1606ರ ನಂತರ ರಾಣಿ ಚೆನ್ನಭೈರದೇವಿಗೆ ಏನಾಯಿತು, ಅವಳ ಅಂತ್ಯ ಹೇಗಾಯಿತು ಎಂದು ಯಾರಿಗೂ ತಿಳಿದಿಲ್ಲ ಆದರೆ ನಮ್ಮಲ್ಲಿ ಕೆಲವರು ಯಾವುದೇ ದಾಖಲೆ ಹಾಗೂ ಕ್ಷೇತ್ರ ಕಾರ್ಯಚರಣೆ ಮಾಡದೆ ಒಂದು ಕಥೆಗೆ ಚಾಲನೆ ನೀಡುತ್ತಾರೆ ಅದೇನೆಂದರೆ – “ಹಿರಿಯ ವೆಂಕಟಪ್ಪ ನಾಯಕರು ರಾಣಿ ಚೆನ್ನಭೈರದೇವಿಯನ್ನು ಸೆರೆ ಮನೆಯಲ್ಲಿ ಉಪವಾಸ ಕೆಡವಿ ಸಾಯಿಸುತ್ತಾನೆ”. ಬಹುಶಃ ಹಿರಿಯ ವೆಂಕಟಪ್ಪ ನಾಯಕರ ಸಂಪೂರ್ಣ ಇತಿಹಾಸವನ್ನು ಒಮ್ಮೆ ಓದಿದರೆ ಕೆಲವು ಇತಿಹಾಸಕಾರರ ಈ ವಾದ ಶುದ್ಧ ಸುಳ್ಳು ಎಂದು ಗೊತ್ತಾಗುತ್ತದೆ.
ಆದರೆ ಇವರುಗಳು ಆಧಾರ ಇಲ್ಲದೇ ಮಾಡಿದ ಆರೋಪ ಇಕ್ಕೇರಿ ನಾಯಕರು ಮತ್ತು ಪ್ರಮುಖವಾಗಿ ಹಿರಿಯ ವೆಂಕಟಪ್ಪ ನಾಯಕರ ಸಾಧನೆಯಲ್ಲಿ ಒಂದು ಕಪ್ಪು ಚುಕ್ಕಿ ಆಗಿದೆ. Everything is fair in war and love ಅನ್ನುವ ಹಾಗೆ ಇಕ್ಕೇರಿ ಮತ್ತು ಗೇರುಸೊಪ್ಪದ ಮಧ್ಯದಲ್ಲಿ ನಡೆದ ಯುದ್ಧದಲ್ಲಿ ಅಪಾರ ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸುತ್ತವೆ. ಯುದ್ಧದ ಸಮಾಪ್ತಿಯ ನಂತರದಲ್ಲಿ ಹಿರಿಯ ವೆಂಕಟಪ್ಪ ನಾಯಕರ ಆದೇಶದಂತೆ ರಾಣಿ ಚೆನ್ನಭೈರದೇವಿಯ ಶ್ರೀಮಂತಿಕೆಗೆ ಕೈಗನ್ನಡಿಯಾಗಿದ್ದ ಗೇರುಸೊಪ್ಪ, ರಾಣಿಯ ಅರಮನೆ ಮತ್ತು ಇತರೆ ಪ್ರಮುಖ ಸ್ಮಾರಕವನ್ನು ಸುಡಲಾಗುತ್ತದೆ ಬಹುಶಃ ಇದರ ಪರಿಣಾಮವಾಗಿ ಏನೋ ಮುಂದೊಂದು ದಿನ ಇಕ್ಕೇರಿ ನಾಯಕರ ರಾಜಧಾನಿ “ಬಿದನೂರು” ಸಹಾ ಬೆಂಕಿಯಲ್ಲಿ ಅದೇ ರೀತಿ ಹೊತ್ತಿ ಊರಿದು ತನ್ನ ಮೂಲ ವರ್ಚಸ್ಸನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ.
ನಾನು ಹಾಗೂ ನನ್ನ ಸ್ನೇಹಿತ ಪ್ರದೀಪ್ (Pradeep HG) ಬಹಳ ವರ್ಷಗಳಿಂದ ರಾಣಿ ಚೆನ್ನಭೈರದೇವಿಯ ಕೊನೆಯ ದಿನಗಳು ಎಲ್ಲಿ ಮತ್ತು ಹೇಗೆ ಇತ್ತು ಎಂದು ಕಂಡು ಹಿಡಿಯಲು ಬೇಕಾದ ಎಲ್ಲಾ ದಾಖಲೆ ಮತ್ತು ಸ್ಥಳೀಯ ಪುರಾಣವನ್ನು ಸಂಗ್ರಹಿಸಲು ಪ್ರಾರಂಭಿಸಿ ಇಂದು ಅದರ ಕೊನೆಯ ಕಾಲಘಟ್ಟವನ್ನು ಮುಟ್ಟಿದ್ದು ಮನಸ್ಸಿಗೆ ಸಮಾಧಾನ ಮತ್ತು ಸಂತೃಪ್ತಿ ನೀಡಿದೆ. ಹಿರಿಯ ವೆಂಕಟಪ್ಪ ನಾಯಕರು ಕರಾವಳಿ, ಮಲೆನಾಡು ಮತ್ತು ಗೇರುಸೊಪ್ಪದ ಮೇಲೆ ವಿಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವನ ಆಪ್ತ ದಂಡ ನಾಯಕ “ಲಿಂಗಣ್ಣ ನಾಯಕ”. 1565ರ ರಕ್ಕಸಗಿ ತಂಗಡಿಗಿ ಯುದ್ಧದ ನಂತರ ವಿಜಯನಗರದ ಹಲವಾರು ಪ್ರಮುಖ ಮಂತ್ರಿಗಳು, ದಂಡ ನಾಯಕರು ಮತ್ತು ವಿದ್ವಾಂಸರು ಇಕ್ಕೇರಿಯಲ್ಲಿ ಆಶ್ರಯ ಪಡೆದು ಮುಂದಿನ ದಿನಗಳಲ್ಲಿ ಇಕ್ಕೇರಿಯ ನಾಯಕರಿಗೆ ತಮ್ಮ ನಿಷ್ಠೆಯನ್ನು ತೋರಿಸುತ್ತಾರೆ. ಲಿಂಗಣ್ಣ ನಾಯಕ ಮತ್ತು ಅವನ ಪೂರ್ವಜರು ಸಹಾ ವಿಜಯನಗರದ ರಾಯರ ಆಸ್ಥಾನದಲ್ಲಿ ಇದ್ದು ಅವರಿಂದ “ನಾಯಕ” ಎಂಬ ಬಿರುದನ್ನು ಇಕ್ಕೇರಿ ನಾಯಕರ ತರಹವೇ ವಂಶ ಪಾರಂಪರ್ಯವಾಗಿ ಉಪಯೋಗಿಸಲು ಅರ್ಹತೆ ಪಡೆದವರು.
1606ರಲ್ಲಿ ಗೇರುಸೊಪ್ಪದ ರಾಣಿ ಚೆನ್ನಭೈರದೇವಿಯನ್ನು ಸೋಲಿಸಿ ಅವಳನ್ನು ರಾಜಧರ್ಮ ಪೂರಕವಾಗಿ ಗೌರವಾನ್ವಿತವಾಗಿ ನಡೆಸಿಕೊಂಡಿದ್ದು ಇದೇ ಲಿಂಗಣ್ಣ ನಾಯಕ. ಹಿರಿಯ ವೆಂಕಟಪ್ಪ ನಾಯಕರ ಆದೇಶದಂತೆ ಲಿಂಗಣ್ಣ ನಾಯಕ ರಾಣಿ ಚೆನ್ನಭೈರದೇವಿಯನ್ನು ರಾಜಧಾನಿ ಇಕ್ಕೇರಿ ಇಂದ ಕೂಗಳತೆ ದೂರದಲ್ಲಿ ಇದ್ದ ಆವಿನಹಳ್ಳಿ ಕೋಟೆಯ ಅರಮನೆಯಲ್ಲಿ ವಾಸಿಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡುತ್ತಾನೆ. ಆವಿನಹಳ್ಳಿ ಕೋಟೆ ಇಕ್ಕೇರಿ ನಾಯಕರ ರಾಜಧಾನಿಗೆ ಹತ್ತಿರ ಇದ್ದರೂ ಸಹಾ ಅದು ರಾಣಿ ಚೆನ್ನಭೈರದೇವಿಯ ರಾಜ್ಯದ ಭಾಗವಾಗಿತ್ತು. ಚೆನ್ನಭೈರದೇವಿ ಅವರ ಆಡಳಿತಕ್ಕೆ ಒಳಪಡುವ ಮುಂಚೆಯೂ ಆವಿನಹಳ್ಳಿ ಕೋಟೆ ಮತ್ತು ಅದರ ಪರಿಸರ ಜೈನರ ಪ್ರಭಾವಕ್ಕೆ ಒಳಗಾಗಿದ್ದು ಇಂದಿಗೂ ಸಹಾ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಇದರ ಕುರುಹುಗಳನ್ನು ಕಾಣಬಹುದು. ನಾವು ನಮ್ಮ ಪೂರ್ವಜರಿಂದ ಕೇಳಿ ಕೊಂಡು ಬೆಳೆದ ಕಥೆಯ ಪ್ರಕಾರ ಇಕ್ಕೇರಿ ನಾಯಕರು ಗೇರುಸೊಪ್ಪದ ರಾಣಿಯನ್ನು ಅತ್ಯಂತ ಗೌರವಾನ್ವಿತವಾಗಿ ನಡೆಸಿಕೊಂಡರು ಮತ್ತು ಹಿರಿಯ ವೆಂಕಟಪ್ಪ ನಾಯಕರ ರಾಣಿಯರು ಚೆನ್ನಭೈರದೇವಿಯ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಇದನ್ನು ಆಧರಿಸಿ ನಮ್ಮ ಕ್ಷೇತ್ರ ಕಾರ್ಯಾಚರಣೆಯನ್ನು ಆವಿನಹಳ್ಳಿ ಮತ್ತು ಅದರ ಪರಿಸರದಲ್ಲಿ ಪ್ರಾರಂಭಿಸಿದಾಗ ನಮಗೆ ಹಲವಾರು ಸಾಕ್ಷ್ಯಗಳು ದೊರೆತವು.
ಇನ್ನೂ ಆವಿನಹಳ್ಳಿಯಲ್ಲಿ ಇರುವ ಕೆಲವು ಜೈನ ಕುಟುಂಬಗಳನ್ನು ಭೇಟಿ ಮಾಡಿದಾಗ ಅವರು ಸಹಾ ರಾಣಿ ಚೆನ್ನಭೈರದೇವಿ ತನ್ನ ಕೊನೆಯ ದಿನಗಳನ್ನು ಆವಿನಹಳ್ಳಿ ಕೋಟೆಯ ಅರಮನೆಯಲ್ಲಿ ಕಳೆದಿರುವ ಬಗ್ಗೆ ಪುಷ್ಟಿ ನೀಡಿದರು. ಇನ್ನೂ ಸ್ವಾರಸ್ಯಕರ ವಿಷಯ ಏನೆಂದರೆ ಸ್ಥಳೀಯರ ಪ್ರಕಾರ ಹಿರಿಯ ವೆಂಕಟಪ್ಪ ನಾಯಕರ ರಾಣಿಯರಾದ ಅಭಿನವ ವೀರಾಂಭ (ವೀರಮ್ಮ) ಮತ್ತು ಭದ್ರಮ್ಮ ಸಮಯ ಸಿಕ್ಕಿದಾಗಲೆಲ್ಲ ಇಕ್ಕೇರಿ ಇಂದ ಆವಿನಹಳ್ಳಿಗೆ ಬಂದು ರಾಣಿ ಚೆನ್ನಭೈರದೇವಿಯನ್ನು ಬೇಟಿ ನೀಡಿ ಅವಳ ಕುಶಲೋಪಚಾರಿಯನ್ನು ವಿಚಾರಿಸುತ್ತಿದ್ದರು. ಇಕ್ಕೇರಿಯ ಪಟ್ಟದ ರಾಣಿಯರು ಯಾವುದೇ ಸ್ಥಾನಮಾನ ಇಲ್ಲದ ನನ್ನನ್ನು ನೋಡಲು ಬರುವುದು ಶಿಷ್ಟಾಚಾರದ ವಿರುದ್ಧವಾಗಿದ್ದು ಹಾಗೆ ಮಾಡ ಬೇಡಿ ಎಂದು ಚೆನ್ನಭೈರದೇವಿ ಹೇಳಿದರು ಸಹಾ ಇಕ್ಕೇರಿಯ ಪಟ್ಟದ ರಾಣಿಯರ ಪಾಲಿಗೆ ಚೆನ್ನಭೈರದೇವಿ ಎಂದೆಂದಿಗೂ ಗೇರುಸೊಪ್ಪದ ರಾಣಿಯಾಗಿಯೇ ಉಳಿದಳು. ಈ ಕಥೆಗೆ ಪುಷ್ಟಿ ನೀಡುವಂತೆ ಇಲ್ಲಿಯ ಅರಣ್ಯದಲ್ಲಿ ಇರುವ ಪ್ರದೇಶವನ್ನು ಸ್ಥಳೀಯರು ಇಂದಿಗೂ ಸಹಾ ವೀರಮ್ಮಾಜೀ ಕೊಡಲು ಮತ್ತು ಭದ್ರಮ್ಮಾಜೀ ಕೊಡಲು ಎಂದು ಕರೆಯುತ್ತಾರೆ. ಸಣ್ಣ ವಯಸ್ಸಿನಲ್ಲಿ ರಾಣಿಯಾಗಿ 54 ವರ್ಷಗಳ ಸುದೀರ್ಘ ಕಾಲ ರಾಜ್ಯಭಾರ ಮಾಡಿದ ಚೆನ್ನಭೈರದೇವಿಗೆ ಜೀವನದಲ್ಲಿ ವೈರಾಗ್ಯ ಮೂಡುತ್ತದೆ. ಇಂತಹ ಸಮಯದಲ್ಲಿ ಜೈನರಲ್ಲಿ ಆಚರಿಸುವ ಸಲ್ಲೇಖನ ವ್ರತವನ್ನು ಆಚರಿಸಲು ಮುಂದಾದ ಚೆನ್ನಭೈರದೇವಿಗೆ ವೆಂಕಟಪ್ಪ ನಾಯಕ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನು ಮಾಡಿಕೊಡುತ್ತಾನೆ.
ಸಲ್ಲೇಖನ ಜೈನ ಧರ್ಮೀಯರ ಒಂದು ಕಠಿಣ ವ್ರತ. ಜೈನಧರ್ಮದ ಅನುಸಾರವಾಗಿ ಪ್ರತೀಕಾರವಿಲ್ಲದ ಉಪಸರ್ಗವಾಗಲೀ, ಮುದಿತನವಾಗಲೀ ಅಥವಾ ರೋಗವಾಗಲೀ ಬಂದೊದಗಿದ್ದಲ್ಲಿ, ಮೋಕ್ಷ ಅಥವಾ ಸದ್ಗತಿಗಾಗಲೀ ಧರ್ಮಪೂರ್ವಕವಾಗಿ ಶರೀರ ತ್ಯಾಗಮಾಡುವ ವಿಧಿಗೆ ಸಲ್ಲೇಖನ ವ್ರತ ಎನ್ನಲಾಗುತ್ತದೆ. ಇದಕ್ಕೆ ಸಮಾಧಿ ಮರಣ ಎಂಬ ಹೆಸರೂ ಇದೆ. ಸಲ್ಲೇಖನ ವ್ರತವು ಗೃಹಸ್ಥನ ನೈಮಿತ್ತಿಕ ಕ್ರಿಯೆಯಾಗಿದೆ. ಗೃಹಸ್ಥನು ಜೀವನದಲ್ಲಿ ಅದುವರೆಗೆ ಅಭ್ಯಾಸಿಸಿದ ಶ್ರಾವಕೀಯ ಆಚಾರಗಳ ಅಂತಿಮ ಪರೀಕ್ಷೆಯೇ ಸಲ್ಲೇಖನ ವ್ರತ. ಚರಿತ್ರೆಯಲ್ಲಿ ಹೊಯ್ಸಳ ರಾಣಿ ಶಾಂತಲೆ ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಳು ಎನ್ನಲಾಗಿದೆ.
ಸಲ್ಲೇಖನ ವ್ರತವನ್ನು ತೆಗೆದುಕೊಂಡ ರಾಣಿ ಚೆನ್ನಭೈರದೇವಿಗಾಗಿ ಇಕ್ಕೇರಿಯ ನಾಯಕರು ಆವಿನಹಳ್ಳಿಯ ಪರಿಸರದಲ್ಲಿ ಇರುವ ಕರೆಯ ದಂಡೆಯ ಮೇಲೆ ಸಲ್ಲೇಖನ ಮಂಟಪವನ್ನು ನಿರ್ಮಾಣ ಮಾಡುತ್ತಾರೆ. ರಾಣಿ ಚೆನ್ನಭೈರದೇವಿ ಈ ಸುಂದರವಾದ ಕಲ್ಲಿನ ಮಂಟಪದಲ್ಲಿ ಪದ್ಮಾಸನ ಭಂಗಿಯಲ್ಲಿ ಅಂಜಲಿ ಮುದ್ರೆಯಲ್ಲಿ ಆಸೀನರಾದಾಗ ಜೈನ ಮುನಿಗಳು ಸಲ್ಲೇಖನ ವ್ರತ ಮತ್ತು ಧರ್ಮ ಭೋದನೆ ಮಾಡುತ್ತಾರೆ.

ಇನ್ನೂ ಎಲ್ಲರಿಗೂ ಗೊತ್ತಿರುವ ಹಾಗೆ ಸಲ್ಲೇಖನ ವ್ರತದಲ್ಲಿ ಹಂತ ಹಂತದಲ್ಲಿ ಜಲ ಮತ್ತು ಆಹಾರವನ್ನು ತ್ಯಾಜಿಸುತ್ತ ಕೆಲವರು ಕೆಲವು ತಿಂಗಳು ಜೀವಿಸಿದರೆ ಇನ್ನೂ ಕೆಲವರು ಕೆಲವು ವರ್ಷಗಳೇ ಜೀವಿಸುತ್ತಾರೆ. ಸಲ್ಲೇಖನ ವ್ರತವನ್ನು ಆಚರಿಸುತ್ತ ಮೋಕ್ಷವನ್ನು ಪಡೆದ ರಾಣಿ ಚೆನ್ನಭೈರದೇವಿಗಾಗಿ ಹಿರಿಯ ವೆಂಕಟಪ್ಪ ನಾಯಕರು ಮಂಟಪವನ್ನು ಒಳಗೊಂಡಂತೆ ಒಂದು ಸುಂದರವಾದ ಕೆಳದಿ ಶೈಲಿಯ ಸ್ಮಾರಕವನ್ನು ನಿರ್ಮಾಣ ಮಾಡುತ್ತಾರೆ. ಭರತಖಂಡ ಕಂಡ ಅತ್ಯಂತ ಶ್ರೇಷ್ಠ ಮತ್ತು ಸುಪ್ರಸಿದ್ಧ ರಾಣಿಗಾಗಿ ಅದ್ಭುತವಾದ ಸ್ಮಾರಕವನ್ನು ನಿರ್ಮಾಣ ಮಾಡಿದ ಹಿರಿಯ ವೆಂಕಟಪ್ಪ ನಾಯಕರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಆದರೆ ಕಾಲಾಂತರದಲ್ಲಿ ಹಲವಾರು ಬದಲಾವಣೆಗೆ ಒಳಪಟ್ಟ ಈ ಸ್ಮಾರಕ ಇಂದು ಒಂದು ಹೊಸ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಭಾರತದಲ್ಲಿ ಇಂತಹ ಅದೆಷ್ಟೋ ಸ್ಮಾರಕಗಳು ಈ ರೀತಿಯ ಬದಲಾವಣೆಯನ್ನು ಕಂಡಿವೇ. ಮಲೆನಾಡಿನ ಅದೆಷ್ಟೋ ಜೈನರ ದೇವಾಲಯಗಳು ಹಿಂದು ದೇವಾಲಯಗಳಾದರೆ ಅದೇ ರೀತಿ ಹಿಂದು ದೇವಾಲಯಗಳು ಸಹಾ ಅನ್ಯ ಧರ್ಮೀಯರ ಪಾಲಾಗಿದೆ.
ಅದೇನೇ ಇರಲಿ ಇಂದು ಇಕ್ಕೇರಿಯ ಯಾವುದೇ ರಾಜ ಮತ್ತು ರಾಣಿಯರ ಗದ್ದುಗೆಗೆ ಪೂಜೆ ನಡೆಯದ್ದಿದ್ದರು ಸಹಾ ರಾಣಿ ಚೆನ್ನಭೈರದೇವಿಯ ಸಲ್ಕೇಖನ ಮಂಟಪ ಸ್ಮಾರಕದಲ್ಲಿ ಮೂರು ಹೊತ್ತು ಪೂಜೆ ನಡೆಯುತ್ತಿರುವುದು ರಾಣಿ ಚೆನ್ನಭೈರದೇವಿಯ ಪುಣ್ಯದ ಫಲವೇ ಸರಿ. ರಾಣಿ ಚೆನ್ನಭೈರದೇವಿಯ ಸಲ್ಲೇಖನ ಮಂಟಪ ಮತ್ತು ಇತರೆ ಮಾಹಿತಿಯನ್ನು ನಾವು ಬರೆಯುತ್ತಿರುವ ಪುಸ್ತಕದಲ್ಲಿ ನೀಡಲಾಗುವುದು. Saakshatv Naavu kelada charitre episode7
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1329100082818367493?s=19
https://twitter.com/SaakshaTv/status/1329100517658619905?s=19








