ಬೆಂಗಳೂರು: ಲಾರಿ ಹಾಗೂ ಆಟೋ ಮಧ್ಯೆ ಅಪಘಾತ ಸಂಭವಿಸಿದ್ದು, ಯುವತಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಸಿಲಿಕಾನ್ ಸಿಟಿಯ (Bengaluru) ಕಾಫಿ ಬೋರ್ಡ್ ಸಿಗ್ನಲ್ ಹತ್ತಿರ ಈ ಘಟನೆ ನಡೆದಿದೆ. ಶಾಲಿನಿ ಸಾವನ್ನಪ್ಪಿರುವ ಯುವತಿ ಎನ್ನಲಾಗಿದೆ.
ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್ ನಿಂದ `ನಮ್ಮ ಯಾತ್ರಿ’ (Namma Yatri) ಆಪ್ ಮೂಲಕ ಯುವತಿ ಆಟೋ ಬುಕ್ ಮಾಡಿದ್ದರು. ಅವರು ಮೆಜೆಸ್ಟಿಕ್ (Megestic) ಕಡೆ ಪ್ರಯಾಣ ಬೆಳಸಿದ್ದರು. ಆದರೆ, ಈ ಸಂದರ್ಭದಲ್ಲಿ ಕಾಫಿ ಬೋರ್ಡ್ ಜಂಕ್ಷನ್ ಸಂಪರ್ಕ ಕಲ್ಪಿಸುವ ಮತ್ತೊಂದು ರಸ್ತೆಯಿಂದ ಬರುತ್ತಿದ್ದ ಲಾರಿ ಸಿಗ್ನಲ್ ಜಂಪ್ ಮಾಡಿ ಆಟೋಗೆ ಗುದ್ದಿದೆ. ಪರಿಣಾಮ ಹಿಂಬದಿ ಸೀಟ್ ನಲ್ಲಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲೇ ಲೋಡ್ ತುಂಬಿದ್ದ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಆಟೋ ಚಾಲಕ ಇಮ್ರಾನ್ ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ. ಈ ಕುರಿತು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.