ADVERTISEMENT
Thursday, June 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಚಾರ್ಯ ಪಾಠಶಾಲಾ ಕಾಲೇಜಿನ ಪ್ರತಿಭೆ- ನಟಶೇಖರ; ನಾಡು ಕಂಡ ಕುಮಾರತ್ರಯರಲ್ಲಿ ಒಬ್ಬರಾದ ಕಲ್ಯಾಣಕುಮಾರ್ ಜೀವನಕಥನ

admin by admin
August 2, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಆಚಾರ್ಯ ಪಾಠಶಾಲಾ ಕಾಲೇಜಿನ ಪ್ರತಿಭೆ- ನಟಶೇಖರ; ನಾಡು ಕಂಡ ಕುಮಾರತ್ರಯರಲ್ಲಿ ಒಬ್ಬರಾದ ಕಲ್ಯಾಣಕುಮಾರ್ ಜೀವನಕಥನ

ಮನೆಯವರ ಮುದ್ದಿನ ಚೊಕ್ಕಣ್ಣ,ತನ್ನ ಜನ್ಮನಾಮ ವೆಂಕಟರಂಗನ್ ಎಂಬ ಹೆಸರು ಹೊಂದಿದ್ದರೂ ಸಹ ಕನ್ನಡ ಚಿತ್ರರಂಗದಲ್ಲಿ ನಲ್ವತ್ತೈದು ವರ್ಷದ (1954-1999) ವರೆಗೆ ಮಿಂಚಿದ್ದು ಕಲ್ಯಾಣ್ ಕುಮಾರ್ ಆಗಿ. ಬೆಂಗಳೂರಿನ ಬಸವನಗುಡಿಯ ರಾಘವಾಚಾರ್ಯರು, ಕಲ್ಯಾಣಮ್ಮನ ಮಗನಾಗಿ1928 ಜುಲೈನಲ್ಲಿ ಹುಟ್ಟಿದವರು. ಓದಿದ್ದು ಅದೇ ಬಸವನಗುಡಿಯ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ. ಮಿದುಳ ತುಂಬ ಸಿನಿಮಾ ನಟನಾಗುವ ಹಂಬಲವಿತ್ತು. ಕನ್ನಡಿಯ ಮುಂದೆ ವಿವಿಧ ಹಾವಭಾವಗಳ ಮೂಲಕ ಅಭಿನಯ ತಾಲೀಮು ನಡೆಸುತ್ತಿದ್ದ ಈತನ ಈ ಚಟುವಟಿಕೆ ತಂದೆಯ ಕಣ್ಣು ಕೆಂಪಗಾಗಿಸಿತು. ಆದರೆ ಮುಂದೆ ಅದೇ ತಂದೆ ಮಗ ನಟಶೇಖರ ಎಂಬ ತನ್ನ ಮೊದಲನೇ ಚಿತ್ರದಲ್ಲಿನ ಅಭಿನಯಕ್ಕಾಗಿ ತಂದೆಯಿಂದಲೇ ಮೆಚ್ಚಿಸಿಕೊಂಡು ಆಶೀರ್ವಾದ ಪಡೆದುಕೊಂಡವರು ಅನ್ನೋದು ಕಲ್ಯಾಣ್ ಅವರ ಅಭಿನಯದ ಸಾಮರ್ಥ್ಯವಾಗಿತ್ತು.

Related posts

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

June 12, 2025
ED ಸಂವಿಧಾನಿಕ ಸಂಸ್ಥೆ ಅಲ್ಲ, ಅದು ಬಿಜೆಪಿಯ ಅಂಗಸಂಸ್ಥೆ: ಬಿ.ಕೆ. ಹರಿಪ್ರಸಾದ್ ಕಿಡಿ

ED ಸಂವಿಧಾನಿಕ ಸಂಸ್ಥೆ ಅಲ್ಲ, ಅದು ಬಿಜೆಪಿಯ ಅಂಗಸಂಸ್ಥೆ: ಬಿ.ಕೆ. ಹರಿಪ್ರಸಾದ್ ಕಿಡಿ

June 12, 2025

ಸಿನಿಮಾ ನಟ ಆಗಲೇಬೇಕೆಂದು ಮನೆ ಬಿಟ್ಟು ಊರೂರು ಅಲೆದಾಡಿದ ಈ ಯುವಕ ತನ್ನ -26ನೆ ವಯಸ್ಸಲ್ಲಿ ನಾಯಕನಾದ ಚಿತ್ರ ನಟಶೇಖರ. ಈ ಚಿತ್ರದ ಕಥೆಯೂ ಕಲ್ಯಾಣ್ ನಿಜ ಜೀವನದ ಕಥೆಯೂ ಒಂದೇ ಆಗಿತ್ತು. ಸಿನಿಮಾ ನಟನಾಗುವ ಹಂಬಲದಿಂದ ಮನೆ ಬಿಟ್ಟು ಚಿತ್ರ-ಪಾತ್ರಗಳಿಗಾಗಿ ಪಡಬಾರದ ಕಷ್ಟಪಡುವ ಅವರ ಬದುಕಿನ ಕಥೆಯೇ ಅದರಲ್ಲೂ ಇತ್ತು. ಸಾಹಿತಿ ನಾಡಿಗೇರ ಕೃಷ್ಣರಾವ್ ಅವರ ಸಂಭಾಷಣೆ, ಸಿ.ವಿ.ರಾಜು ಅವರ ನಿರ್ದೇಶನದ ಈ ಚಿತ್ರ ತೆರೆಕಂಡಿದ್ದು 1954ರಲ್ಲಿ.

ರಾಜಕುಮಾರ್ ಅವರು ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ ತೆರೆಕಂಡ ಕೆಲವೇ ತಿಂಗಳ ಅಂತರದಲ್ಲಿ ಈ ಚಿತ್ರ ತೆರೆಗೆ ಬಂತು. ರಾಜಕುಮಾರ್, ಉದಯಕುಮಾರ್, ಕಲ್ಯಾಣ್ ಕುಮಾರ್ ಕುಮಾರತ್ರಯ ರಾದರೂ ಸಹ ಉದಯಕುಮಾರ್ ತೆರೆಗೆ ಬಂದಿದ್ದು 1956ರ ಭಾಗ್ಯೋದಯದ ಮೂಲಕ. ಹಾಗಾಗಿ ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್ ಕುಮಾರ ತ್ರಯರು ಅನ್ನುವುದು ಕಾಲಾನುಕ್ರಮದ ದೃಷ್ಟಿಯಿಂದ ನಿಖರವಾದ ಸಂಯೋಜನೆ.

ರಾಜಕುಮಾರ್-ಕಲ್ಯಾಣ್ ಕುಮಾರ್ ಜೋಡಿಯ ಕಮಾಲ್:

ಕನ್ನಡ ಚಿತ್ರರಂಗದಲ್ಲಿ ಜೊತೆ ಜೊತೆಗೆ ಬಂದ ಈ ಇಬ್ಬರೂ ಕಲಾವಿದರು ಎಷ್ಟೋ ಸಲ ತಾವು ಇಳಿದು ಕೊಳ್ಳುತ್ತಿದ್ದ ಹೊಟೆಲ್ ರೂಮುಗಳಲ್ಲಿ ನೆಲದ ಮೇಲೆ ಮಲಗಿ ದಿನಗಳನ್ನು ಕಳೆದ ಅನ್ಯೋನ್ಯತೆಯ ಘಟನಾವಳಿಗಳಿದ್ದವು. ಭೂಕೈಲಾಸ ಚಿತ್ರದ ಸಂದರ್ಭದಲ್ಲಿ ರಾಜ್(ರಾವಣ) ಕಲ್ಯಾಣ್ (ನಾರದ) ಹಗ್ಗದ ಮಂಚದ ಮೇಲೆ ಮಲಗಿ ಒಟ್ಟಿಗೆ ಹರಟುತ್ತಾ ಕಾಲ ಕಳೆಯುತ್ತಿದ್ದರಂತೆ.

ರಾಜಕುಮಾರ್ ಅವರಿಗಿಂತ ಕಲ್ಯಾಣ್ 9 ತಿಂಗಳು ದೊಡ್ಡವರು. ಉದಯಕುಮಾರ್ ಅವರಿಗಿಂತ 5 ವರ್ಷ ದೊಡ್ಡವರು. ರಾಜ್-ಕಲ್ಯಾಣ್ ಅನೇಕ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಕುಮಾರತ್ರಯರಲ್ಲಿ ಮೊದಲು ಕಾರ್ ಖರೀದಿಸಿದ ಹಿರಿಮೆ ಕಲ್ಯಾಣ್ ಕುಮಾರ್ ಅವರದ್ದು. ಅಷ್ಟೇ ಅಲ್ಲ, ರಾಜಕುಮಾರ್ ಅವರಿಗೆ ಕಾರ್ ಡ್ರೈವಿಂಗ್ ಹೇಳಿಕೊಟ್ಟಿದ್ದೇ ಕಲ್ಯಾಣ್ ಕುಮಾರ್. ಇದನ್ನು ರಾಜಕುಮಾರ್ ಅವರೇ ಹಲವು ಸಲ ಹೇಳಿಕೊಂಡೂ ಇದ್ದರು.

ಒಮ್ಮೆ ರಾಜ್ ಮೂಲಕ ಕಲ್ಯಾಣ್ ಅವರಿಗೆ ಸನ್ಮಾನ, ಕಲ್ಯಾಣ್ ರಾಜ್ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ ಇತ್ತು. ಆಗ ಕಲ್ಯಾಣ್ ಮಾತಾಡುತ್ತ “ರಾಜಕುಮಾರ್ ಹಿಮಾಲಯದ ಥರ, ನಾನೋ ಚಾಮುಂಡಿ ಬೆಟ್ಟ ಇದ್ದಷ್ಟು ಮಾತ್ರ ಅಂದರು. ಆದರೆ ಗೆಳೆಯನನ್ನು ಎಂದೂ ಬಿಟ್ಟು ಕೊಡದ ರಾಜಕುಮಾರ್ “ಊಹೂಂ, ನಾನಿದನ್ನ ಒಪ್ಪಲ್ಲ, ಹಿಮಾಲಯದಲ್ಲಿ ನಮ್ಮಪ್ಪ ಶಿವ ಇದ್ದರೆ,ಚಾಮುಂಡಿ ಯಲ್ಲಿ ನಮ್ಮಮ್ಮ ಚಾಮುಂಡಿ ಇದ್ದಾಳೆ, ಇಬ್ಬರೂ ಮುಖ್ಯ. ಕಲಾವಿದರಲ್ಲಿ ಯಾರೂ ದೊಡ್ಡವರೂ ಅಲ್ಲ,ಚಿಕ್ಕವರೂ ಅಲ್ಲ” ಅಂದಾಗ ಅಲ್ಲಿದ್ದ ಮಂದಿ ರಾಜ್ ಮತ್ತು ಕಲ್ಯಾಣ್ ರ ವಿನಯವಂತಿಕೆಯ ಮಾತುಗಳಿಗೆ ಸೋತು ಹೋಗಿದ್ದರು.

ಸಾಮಾನ್ಯವಾಗಿ ಯಾರನ್ನೂ ಏಕವಚನದಲ್ಲಿ ಮಾತಾಡಿಸದ ರಾಜ್, ಕಲ್ಯಾಣ್ ಕುಮಾರ್ ಮರಣಿಸಿದಾಗ “ನಂಗೆ ದಾದಾಫಾಲ್ಕೆ ಪ್ರಶಸ್ತಿ ಬಂದಾಗ ತನಗೇ ಬಂತೇನೋ ಅನ್ನೋ ಹಾಗೆ ಖುಷಿ ಪಟ್ಟಿದ್ದ, ಅವನೂ ಹೋಗಿಬಿಟ್ನಾ” ಅಂದು ಕಣ್ಣೀರು ಹಾಕಿದ್ದರು. ರಾಜ್, ಕಲ್ಯಾಣ್, ಉದಯ್ ಪೂರ್ಣ ಪ್ರಮಾಣದಲ್ಲಿ ಒಟ್ಟಿಗೆ ಅಭಿನಯಿಸಿದ ಏಕೈಕ ಚಿತ್ರ ಭೂದಾನ.

ಉದಯಕುಮಾರ್-ಕಲ್ಯಾಣಕುಮಾರ್ ಜೋಡಿ ಕಾರ್ಯಾಚರಣೆ:

ಕಲ್ಯಾಣ್ ಕುಮಾರ್, ಉದಯಕುಮಾರ್ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಕಲ್ಯಾಣ್ ತಾವೇ ನಿರ್ಮಿಸಿ, ನಿರ್ದೇಶಿಸಿದ ಪ್ರವಾಸಿಮಂದಿರ ಅನ್ನುವ ಚಿತ್ರಕ್ಕೆ ಉದಯಕುಮಾರ್ ಅವರಿಂದ ” ಈ ಬದುಕೇ ಪ್ರವಾಸೀಮಂದಿರ” ಅನ್ನುವ ಗೀತೆ ಬರೆಸಿದ್ದರು. ಪ್ರವಾಸಿಮಂದಿರ ಎಂಬ ಕಲ್ಯಾಣ್ ಅವರ ನಿರ್ಮಾಣ, ನಿರ್ದೇಶನದ ಈ ಚಿತ್ರ ಸಂಪೂರ್ಣವಾಗಿ ಹೊರಾಂಗಣ ದಲ್ಲಿ ತೆಗೆದ ಮೊದಲ ಕನ್ನಡ ಚಿತ್ರ. ಎಂದೂ ನಿನ್ನವನೇ ಎಂಬ ಅವರದ್ದೇ ನಿರ್ಮಾಣ, ನಿರ್ದೇಶನದ ಇನ್ನೊಂದು ಚಿತ್ರದಲ್ಲಿ ಎಲ್ಲ ಕಲಾವಿದರೂ ಮೇಕಪ್ ಇಲ್ಲದೆಯೇ ನಟಿಸಿದ ವಿಶಿಷ್ಟ ಚಿತ್ರ. ಇದೂ ಸಹ ಕನ್ನಡದಲ್ಲೇ ಈ ರೀತಿಯ ಮೊತ್ತಮೊದಲ ಪ್ರಯತ್ನ.

ಕಲ್ಯಾಣ್ ಕುಮಾರ್ -ಜಯಲಲಿತ ತಾರಾಜೋಡಿ:

ಅಯ್ಯಂಗಾರ್ ಕುಟುಂಬದ ತಮಿಳು ಮನೆಮಾತಿನ ಇಬ್ಬರೂ ಕಲಾವಿದರಾದ ಕಲ್ಯಾಣ್-ಜಯಲಲಿತ
ಕರ್ನಾಟಕದವರು ಸರಿ. ಆದರೆ ಕಲ್ಯಾಣ್ ಕುಮಾರ್ ಅವರೇ ಜಯಲಲಿತ ಅವರು ಕನ್ನಡದಲ್ಲಿ ಅಭಿನಯಿಸಿದ ಐದೂ ಚಿತ್ರಗಳ ನಾಯಕ ಅನ್ನುವುದು ಕಾಕತಾಳಿಯ ಅಚ್ಚರಿ. ನನ್ನ ಕರ್ತವ್ಯ, ಚಿನ್ನದ ಗೊಂಬೆ, ಮಾವನ ಮಗಳು, ಬದುಕುವದಾರಿ, ಮನೆ ಅಳಿಯ ಆ ಚಿತ್ರಗಳು.

ನಾಗೇಶ್ವರರಾವ್-ಕಲ್ಯಾಣ್ ಕುಮಾರ್ ಸಿನಿಮಾಗಳು:

1964ರಲ್ಲಿ ಬಿ.ಎಸ್ ರಂಗ ನಿರ್ಮಿಸಿ, ನಿರ್ದೇಶಿಸಿದ ಅಮರಶಿಲ್ಪಿ ಜಕಣಾಚಾರಿ ಕನ್ನಡದ ಮೊದಲ ವರ್ಣ ಚಿತ್ರ. ತೆಲುಗಲ್ಲೂ ರಂಗ ಅವರೇ ನಿರ್ಮಿಸಿ ನಿರ್ದೇಶಿಸಿದ ಈ ಚಿತ್ರದ ತೆಲುಗಿನ ಅವತರಣಿಕೆಯ ನಾಯಕ ನಾಗೇಶ್ವರ ರಾವ್. ಕನ್ನಡದಲ್ಲಿ ಜಕಣಾಚಾರಿ ಪಾತ್ರವನ್ನು ರಾಜಕುಮಾರ್ ಮಾಡಬೇಕಿತ್ತಾದರೂ ಅದು ಕಲ್ಯಾಣ್ ಅವರಿಗೆ ಒಲಿಯಿತು. ಹೀಗಾಗಿ ಕನ್ನಡದ ಮೊದಲ ವರ್ಣಚಿತ್ರದ ನಾಯಕನಾದ ಕೀರ್ತಿ ಕಲ್ಯಾಣ್ ಕುಮಾರ್ ಅವರದ್ದಾಯಿತು. ಆದರೆ, ನಾಗೇಶ್ವರರಾವ್ ಕಲ್ಯಾಣ್ ನನಗಿಂತ ಚೆನ್ನಾಗಿ ಮಾಡಿದಾನೆ ಎಂದು ಮನಸಾರೆ ಕಲ್ಯಾಣಕುಮಾರ್ ಅವರನ್ನು ಅಭಿನಂದಿಸಿ ದ್ದರು. ಸದಾರಮೆ ಚಿತ್ರದಲ್ಲೂ ಸಹ ನಾಗೇಶ್ವರರಾವ್ ಇದೇ ಮಾತುಗಳನ್ನು ಕಲ್ಯಾಣ್ ಕುಮಾರ್ ಬಗ್ಗೆ ಆಡಿದ್ದರು.

ತಮಿಳಿನಲ್ಲಿಯೂ ಮಿಂಚಿದ್ದರು ನಮ್ಮ ಕಲ್ಯಾಣ್ ಕುಮಾರ್:

ತಮಿಳಿನಲ್ಲೂ ನೆಂಜಿಲ್ ಮರಪ್ಪ ದಿಲೈ ಮಣಿ ಓಸೈ, ತೆಂಡ್ರಲ್ ವೀಡು, ತಾಯಿ ಇಲ್ಲಾದ ಪಿಳ್ಳೈ.. ಹೀಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ ಕಲ್ಯಾಣ್ ಅವರ ಸೂಪರ್ ಹಿಟ್ ತಮಿಳುಚಿತ್ರ ನೆಂಜಿಲ್ ಒರು ಆಲಯಂ, ಈ ಚಿತ್ರದಲ್ಲಿ ಅವರ ಅಭಿನಯ ಮನೋಜ್ಞವಾಗಿತ್ತು. ಇದನ್ನೇ ಹಿಂದಿಯಲ್ಲಿ ದಿಲ್ ಏಕ್ ಮಂದಿರ್ ಅಂತ ತೆಗೆದರೂ ಕಲ್ಯಾಣ್ ಅಭಿನಯವೇ ಅತ್ಯಂತ ಸೊಗಸಾಗಿತ್ತು. ಪಕ್ಷಿರಾಜ ಫಿಲಮ್ಸ್ ಲಾಂಛನದಲ್ಲಿ ತೆರೆಕಂಡ ಬೆಟ್ಟದ ಕಳ್ಳ ಕನ್ನಡದ ಮೊದಲ ರೀಮೇಕ್ ಚಿತ್ರ. ಇದರಲ್ಲೂ ಮೂಲ ತಮಿಳು ನಾಯಕ ಪಾತ್ರಧಾರಿ ಗಿಂತ ಕಲ್ಯಾಣ್ ಅಭಿನಯ ಮೇಲ್ಮಟ್ಟ ದಲ್ಲಿತ್ತು. ಮುತ್ತು ರಾಮನ್(ನಟ ಕಾರ್ತೀಕ್ ಅವರ ತಂದೆ) ಜೊತೆಗಷ್ಟೇ ಅಲ್ಲದೆ,ಎಂ.ಜಿ.ಆರ್ ಅವರ ಜೊತೆಗೂ ಪಾಶಂ ಎನ್ನುವ ಚಿತ್ರದಲ್ಲಿ ಕಲ್ಯಾಣ್ ಅಭಿನಯಿಸಿದ್ದಾರೆ. ದೇವರೆಲ್ಲಿದ್ದಾನೆ ಚಿತ್ರದ ಮನೆ ಆಳು ರಾಮಣ್ಣನ ಪಾತ್ರದಲ್ಲಿ ನೋಡುಗರ ಕಣ್ಣಾಲಿಗಳನ್ನು ಮಂಜಾಗಿಸುವ ಕಲ್ಯಾಣ್ ಗುರುಭಕ್ತಿ, ತಾಯಿ ತಂದೆ,ಹೆತ್ತವರು ಅಲ್ಲದೆ, ಉಷಾ, ಕಾವ್ಯಚಿತ್ರಗಳಲ್ಲಿ ಮನಸ್ಪರ್ಶೀ ಅಭಿನಯವನ್ನು ಮರೆಯಲು ಸಾಧ್ಯವೇ.

ಸಂಭ್ರಮ ಕಲ್ಯಾಣ್ ಅವರಿದ್ದಾಗ ತೆರೆಕಂಡ ಚಿತ್ರವಾದರೆ, ಸಂಕಟ ಬಂದಾಗ ವೆಂಕಟರಮಣ ತೆರೆ ಕಾಣುವಷ್ಟರಲ್ಲಿ ಕಲ್ಯಾಣ್ ಕುಮಾರ್ ಎಂಬ ಬೆಳ್ಳಿತೆರೆಯ ಕಲಾವಿದ ಕಾಲದ ಪರದೆಯೊಳಗೆ ಸೇರಿಹೋಗಿದ್ದರು.

ಕಲ್ಯಾಣಕುಮಾರ್ ಸಾಧನೆಗಳು:

ಮನೆಗೆಬಂದ ಮಹಾಲಕ್ಷ್ಮಿ ಚಿತ್ರದ ನಾಯಕಿ ರೇವತಿಯವರನ್ನು ಪ್ರೀತಿಸಿ ಅವರನ್ನು ಮನೆ ಮನದ ಮಹಾಲಕ್ಷ್ಮಿಯವರನ್ನಾಗಿ ಪಡೆದು ಕಲ್ಯಾಣ ಮಾಡಿಕೊಂಡವರು ಕಲ್ಯಾಣ್. ಇತ್ತೀಚೆಗೆ ತೀರಿಹೋದ ರೇವತಿಯವರು ಒಳ್ಳೆಯ ಕಥೆಗಾರ್ತಿ. ರೇವತಿಯವರ ನನ್ನ ತಮ್ಮ ರಾಮು. ಸೇರಿದಂತೆ ಅನೇಕ ನಾಟಕಗಳನ್ನು ಕಲ್ಯಾಣಕುಮಾರ್ ನಿರ್ದೇಶಿಸಿ ಅಭಿನಯಿಸು ತ್ತಿದ್ದರು. ಕಷ್ಟದಲ್ಲಿ ಇರುವ ಕಲಾವಿದರಿಗಾಗಿ ಅಶಕ್ತ ಕಲಾವಿದರ ಕಲ್ಯಾಣ ಸಂಘ ಸ್ಥಾಪಿಸಿ ಅದೆಷ್ಟೋ ಕಲಾವಿದರಿಗೆ ನೆರವಾದವರು ಕಲ್ಯಾಣಕುಮಾರ್. ಅಕಾಲಿಕವಾಗಿ ತೀರಿಹೋದ (ಕನ್ನಡ ಬಾವುಟದ ರೂವಾರಿ) ಸೀತಾರಾಮಶಾಸ್ತ್ರಿಗಳ ಮಗ ಮ.ರಾಮಮೂರ್ತಿ ಅವರ ಕುಟುಂಬಕ್ಕೆ ಧನಸಹಾಯ ಮಾಡಿ ಪ್ರಚಾರ ಬಯಸದೆ ಸುಮ್ಮನಿದ್ದವರು ಕಲ್ಯಾಣಕುಮಾರ್. ಒಮ್ಮೆ ಇದರ ಕುರಿತು ಪತ್ನಿ ರೇವತಿಯ ವರೇ “ಅಯ್ಯೋ ಅವರು ಇದ್ದಿದ್ದೇ ಹಾಗೆ ಯಾವ ಪ್ರಚಾರವನ್ನೂ ಬಯಸ್ತಾನೇ ಇರಲಿಲ್ಲ” ಅಂದಿದ್ದೂ ಉಂಟು.

ಅನೇಕ ಕಾರಣಗಳಿಂದ ಹಲವು ವರ್ಷ ಕನ್ನಡದಲ್ಲಿ ಚಿತ್ರ- ಪಾತ್ರಗಳಿಲ್ಲದೆ ನೊಂದ ಕಲ್ಯಾಣ್ ಅವರಿಗೆ ಮರುಜನ್ಮ ನೀಡಿದ್ದು ತಾಯಿಯ ನುಡಿ ಚಿತ್ರ. ಹೆಂಡತಿಯನ್ನು ಸ್ಮಶಾನದಲ್ಲಿ ಅನ್ನಪೂರ್ಣ, ಅನ್ನಪೂರ್ಣ ಎಂದು ಹುಡುಕುತ್ತಾ ಗೋಳಾಡುವ ಕಲ್ಯಾಣ್ ಅಭಿನಯ ಅದ್ಭುತವಾಗಿತ್ತು. ತಾರೆ ಭಾರತಿ ಯವರನ್ನು ತಮ್ಮದೇ ನಿರ್ಮಾಣದ ಲವ್ ಇನ್ ಬ್ಯಾಂಗಳೂರ್ (ಕನ್ನಡದ ಪೂರ್ಣ ಪ್ರಮಾಣದ ಇಂಗ್ಲಿಷ್ ಶೀರ್ಷಿಕೆ ಹೊತ್ತ ಮೊದಲ ಚಿತ್ರ) ಮೂಲಕ ನಾಯಕಿಯಾಗಿ ಪರಿಚಯಿಸಿದವರು ಕಲ್ಯಾಣ್. ಆರ್.ಕೆ ಪಿಕ್ಚರ್ಸ್ ಅವರದ್ದೇ ನಿರ್ಮಾಣ ಸಂಸ್ಥೆಯ ಹೆಸರು.

ಸೋತರೂ ಧೈರ್ಯಗೆಡದ ಕಲಾರತ್ನ-

ಕಲ್ಯಾಣಕುಮಾರ್ ಆ ಕಾಲಕ್ಕೇ ನಾಯಕನಾಗಿಯೂ ಕೆಟ್ಟ ನಡಾವಳಿಯ ನಾಯಕನಾಗಿ ಅಭಿನಯಿಸಿದರು. ಗಾಳಿಗೋಪುರ ಚಿತ್ರದ ತಂದೆ ತಾಯಿಗೆ ಮೋಸ ಮಾಡುವ ಮಗ, ಬೆಳ್ಳಿಮೋಡದ ಸ್ವಾರ್ಥೀ ನಾಯಕ, ಸುಬ್ಬಾಶಾಸ್ತ್ರಿ ಚಿತ್ರದ ನಯವಂಚಕ ಪಾತ್ರ. ಆದರೆ ತಮ್ಮ ಕಾಲದಿಂದ ಬಹಳ ಮುಂದೆ ನಡೆದ ಕಲ್ಯಾಣ್ ಅವರ ಈ ಬಗೆಯ ಪಾತ್ರಗಳನ್ನು ಆಗಿನ ಕಾಲದ ಜನ ಒಪ್ಪಲಿಲ್ಲ, ಈಗ ಶಾರೂಖ್ ಖಾನ್, ಅಮಿರ್ ಖಾನ್ ಅಕ್ಷಯಕುಮಾರ್ ಮಾಡುತ್ತಿರುವ ಪಾತ್ರಗಳನ್ನು ಯಶಸ್ವಿಯಾಗಿ ಆ ಕಾಲದಲ್ಲೇ ಮಾಡಿದವರು ಕಲ್ಯಾಣ್.

ಆದರೆ ಜನ ನಕಾರಾತ್ಮಕ ವಾಗಿ ನೋಡಿದ್ದರ ಪರಿಣಾಮ ಕಲ್ಯಾಣ್ ಅವರಿಗೆ ತಟ್ಟಿತು. ಸತತ ಸೋಲುಗಳಿಗೆ ಒಳಗಾದರು.ತಾವೇ ಆರಂಭಿಸಿದ್ದ ಹೋಟೆಲ್‌ ನವರಸ ಅವರ ಪಾಲಿಗೆ ಮತ್ತು ಬಾಳಿಗೆ ದುಃಖರಸವನ್ನೇ ನೀಡಿತು. ಕೋಳಿ ಫಾರಂ ಲಾಭದ ಬದಲು ನಷ್ಟದಿಂದ ಕೊಕ್ಕೊಕ್ಕೋ ಅಂದು ಮಕಾಡೆ ಮಲಗಿತು.

ಒಮ್ಮೆ ಕಲ್ಯಾಣ್ ಅವರನ್ನು ಮಾತಾಡಿಸುತ್ತಾ ಪುಟ್ಟಣ್ಣ ಕಣಗಾಲ್ “ಅಲ್ಲರೀ, ನಾನು ಕೆಲವು ಚಿತ್ರಗಳ ಸೋಲುಗಳನ್ನೇ ಆಧರಿಸಿಕೊಳ್ಳಲು,ಆಗ್ತಾ ಇಲ್ಲ ನೀವು ಹೇಗಪ್ಪಾ ಇಷ್ಟು ಸೋಲು ಗಳನ್ನು ಆಧರಿಸಿಕೊಂಡು ಸಹಿಸಿಕೊಂಡಿದ್ದೀರಾ” ಅಂದರಂತೆ. ಆಗ ನಸುನಕ್ಕು ಕಲ್ಯಾಣಕುಮಾರ್ “ಪುಟ್ಟಣ್ಣ, ಏನಿಲ್ಲ, ಸೋಲುಗಳೇ ನನ್ನನ್ನು ಆಧರಿಸಿಕೊಂಡು ನಿಂತಿದೆ ಅಷ್ಟೇ” ಅಂತ ವಿಷಾದ ಪೂರಿತ ನಗೆ ಬೀರಿದ್ದರು.

ಕಾಲೇಜುರಂಗದ ಪ್ರೊಫೆಸರ್ ಪಾತ್ರಕ್ಕೆ ನ್ಯಾಯವಾಗಿ ಕಲ್ಯಾಣ್ ಗೆ ರಾಜ್ಯಪ್ರಶಸ್ತಿ ಸಿಗಬೇಕಿತ್ತು ಅಂತ ನೊಂದಿದ್ದವರು ಪುಟ್ಟಣ್ಣ. ಆದರೆ ಕಲ್ಯಾಣ್ ಗೆ ಕಲಾರತ್ನ ,ರಾಜ್ಯೋತ್ಸವ ಪ್ರಶಸ್ತಿ ಬಂದಿದೆಯೇ ಹೊರತು ಒಂದೇ ಒಂದು ಚಿತ್ರಕ್ಕೂ ಅತ್ಯುತ್ತಮ ನಾಯಕನಟ ರಾಜ್ಯಪ್ರಶಸ್ತಿ ಸಿಕ್ಕಿಲ್ಲ.

ಕಡೆಗಾಲದಲ್ಲೂ ಕನ್ನಡ ಕಲಾವಿದರನ್ನು ಹಾಕಿಕೊಂಡು ಚಿತ್ರನಿರ್ಮಿಸಿ ಅಲ್ಲೂ ಸೋತು ಹೈರಾಣಾದ ಕಲ್ಯಾಣ ಕುಮಾರ್ ಬದುಕು ಬಹಳ ಸಂಕಟಕ್ಕೆ ಈಡಾಯಿತು. ಒಂದು ಕಾಲದಲ್ಲಿ ಆಚಾರ್ಯ ಪಾಠಶಾಲೆಯಲ್ಲಿಯೇ ವ್ಯಾಸಂಗ ಮಾಡಿದ ರಜನೀಕಾಂತ್ ಅದೇ ಆಚಾರ್ಯ ಪಾಠಶಾಲೆ ಯಲ್ಲಿ ಓದಿದ ಕಲ್ಯಾಣ್ ಅವರನ್ನು ಮಾತಾಡಿಸುವ ಸಲುವಾಗಿ ತಮ್ಮ ತಾರುಣ್ಯದ ದಿನಗಳಲ್ಲಿ ಕಾಯುತ್ತಾ ಇರುತ್ತಿದ್ದದ್ದೂ ಉಂಟು.

ನಗಬೇಕಮ್ಮ ನಗಬೇಕು ಚಿತ್ರದ ಸಮಯದಲ್ಲಿ ನನಗೆ ಭಾವನೆಗಳ ಅಭಿವ್ಯಕ್ತಿ, ನಟನೆ ತಿದ್ದಿದವರು ಕಲ್ಯಾಣ್ ಕುಮಾರ್ ಎನ್ನುವ ಜಯಮಾಲ, ನಾನು ನಾಯಕನಾಗಿ ಹೆಸರು ಮಾಡಿದಾಗ ‘ಏ, ನಮ್ಮ ಏರಿಯ ಹುಡುಗನಪ್ಪ’ ಎಂದು ಶ್ರೀನಾಥ್ ಅವರನ್ನು ಸಂತೋಷದಿಂದ ಮೆಚ್ಚುತ್ತಿದ್ದ ಕಲ್ಯಾಣಕುಮಾರ್ “ಏನ್ಮಾಡೋದು, ನಾನು ಹುಟ್ಟಿರೋದು ಪುನರ್ವಸು ನಕ್ಷತ್ರದಲ್ಲಿ. ಅದು ಶ್ರೀರಾಮಚಂದ್ರ ಹುಟ್ಟಿದ ನಕ್ಷತ್ರ. ಆ ಶ್ರೀರಾಮನಿಗೇ ಕಷ್ಟ ತಪ್ಪಲಿಲ್ಲ,ಇನ್ನು ನಾನ್ಯಾವ ಲೆಕ್ಕ” ಅನ್ನುತ್ತಾ ಬದುಕು ದೂಡುತ್ತಿದ್ದ ಕಲ್ಯಾಣಕುಮಾರ್ ಅವರ ದುರ್ಭರ ಸರಣಿ ಸಂಕಷ್ಟಗಳ ಸರಮಾಲೆ ಸಾಲದು ಅನ್ನೋ ಹಾಗೆ ಅವರಿಗೆ ಕ್ಯಾನ್ಸರ್ ತಗುಲಿತು.

ಅಲ್ಲಿಗೆ 1999 ಆಗಸ್ಟ್ 1ತಮ್ಮ -71ನೇ ವರ್ಷದಲ್ಲಿ ಕಲ್ಯಾಣಕುಮಾರ್ ಬದುಕಿಗೆ For cancer, there is no answer, except death ಅನ್ನುವಂತೆ ಅವರ ಬದುಕು ಸಾವಿನ ರೂಪದಲ್ಲಿ ಕಲ್ಯಾಣ ಹಾಡಿತು.

ಕೊನೆಗಾಲದಲ್ಲೂ ಕಿರುತೆರೆಯ ಮನೆತನ, ಕಾಸ್ಟ್ಲಿ ಅಳಿಯ ಧಾರಾವಾಹಿ ಗಳಲ್ಲಿ ಅಭಿನಯಿಸುತ್ತಿದ್ದ ಕಲ್ಯಾಣ್ ಅಭಿನಯಕ್ಕೆ ಪೂರ್ಣವಿರಾಮ ದೊರಕಿತು.
ಕಲ್ಯಾಣ್ ನೆನಪು ಎಲ್ಲ ಕನ್ನಡಿಗರಲ್ಲೂ ಕಣ್ಣೀರಿಗೆ ಕನ್ನಡಿ ಹಿಡಿದು ಕಣ್ಣಾಲಿಗಳು ನೆನೆಯತ್ತಾ ಅವರನ್ನು ನೆನೆಯುವ ಹಾಗೆ ಅವರದ್ದೇ ಅಭಿನಯದ ಬೆರೆತ ಜೀವ ಸಿನಿಮಾದ “ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೇ, ವಹಿಸಿದ ಪಾತ್ರ ತೀರಿದ ಮೇಲೆ ರಂಗದ ಮೇಲೆ ನಿಲಲಹುದೇ ಎಂಬಂತೆ ೧೯೯೯ ಆಗಸ್ಟ್ ೧ಕ್ಕೆ ಕಲ್ಯಾಣ್ ಕಣ್ಮರೆಯಾಗಿ ಈಗ ೨೧ ವರ್ಷವಾಗುತ್ತದೆ. ಆದರೆ ಅವರ ಚೈತನ್ಯಶಕ್ತಿಯ ಸ್ಪೂರ್ತಿ, ಕನ್ನಡತ್ವಕ್ಕೆ ಸಾವು ಸುಳ್ಳಿನ ಮಾತಲ್ಲವೆ.

ಮಾಹಿತಿ ಮತ್ತು ಲೇಖನ: ಡಾ.ಶ್ರೀನಿವಾಸ ಪ್ರಸಾದ್ ಡಿ.ಎಸ್. ಕೋಲಾರ
ಕೃಪೆ: ಪುರುಷೋತ್ತಮ್ ಕಳಲೆ

ಫೋಟೋ ಕೃಪೆ: ಭವಾನಿ ಲಕ್ಷ್ಮಿನಾರಾಯಣ್ ಮತ್ತು ಅಂತರ್ಜಾಲ

Tags: bengalurudr. raju kumarfilmFilm actorindian fimKalyanakumarkannada filmkarnatakaputtanna kanagal
ShareTweetSendShare
Join us on:

Related Posts

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025

by Shwetha
June 12, 2025
0

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025 – ಅಕೌಂಟೆಂಟ್ ಹುದ್ದೆ, ರಾಯಚೂರು ಜಿಲ್ಲಾ ಪಂಚಾಯತ್ ವತಿಯಿಂದ ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಫ್‌ಲೈನ್ ಮತ್ತು ಆನ್ಲೈನ್...

ED ಸಂವಿಧಾನಿಕ ಸಂಸ್ಥೆ ಅಲ್ಲ, ಅದು ಬಿಜೆಪಿಯ ಅಂಗಸಂಸ್ಥೆ: ಬಿ.ಕೆ. ಹರಿಪ್ರಸಾದ್ ಕಿಡಿ

ED ಸಂವಿಧಾನಿಕ ಸಂಸ್ಥೆ ಅಲ್ಲ, ಅದು ಬಿಜೆಪಿಯ ಅಂಗಸಂಸ್ಥೆ: ಬಿ.ಕೆ. ಹರಿಪ್ರಸಾದ್ ಕಿಡಿ

by Shwetha
June 12, 2025
0

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ದೇಶದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಈ ಕ್ರಮದ ಕುರಿತು ರಾಜಕೀಯ...

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಉಡುಗೊರೆ: 6,405 ಕೋಟಿ ಮೌಲ್ಯದ ಬಹುಪಥ ರೈಲ್ವೆ ಯೋಜನೆಗೆ ಒಪ್ಪಿಗೆ!

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಉಡುಗೊರೆ: 6,405 ಕೋಟಿ ಮೌಲ್ಯದ ಬಹುಪಥ ರೈಲ್ವೆ ಯೋಜನೆಗೆ ಒಪ್ಪಿಗೆ!

by Shwetha
June 12, 2025
0

ರಾಜ್ಯದ ಸಮಗ್ರ ಸಂಚಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ದಿಕ್ಕು ತೋರಿಸುವ ಪ್ರಮುಖ ಹೆಜ್ಜೆಯಾಗಿ, ಕೇಂದ್ರ ಸಂಪುಟವು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆಗಾಗಿ ಮಹತ್ವದ...

ವಿಶ್ವದಲ್ಲಿ ಹಿಂದೂಗಳಷ್ಟೇ ಸಮಾನ ವೇಗದಲ್ಲಿ ಮುಸ್ಲಿಮರ ಜನಸಂಖ್ಯೆ ವೃದ್ಧಿ

ವಿಶ್ವದಲ್ಲಿ ಹಿಂದೂಗಳಷ್ಟೇ ಸಮಾನ ವೇಗದಲ್ಲಿ ಮುಸ್ಲಿಮರ ಜನಸಂಖ್ಯೆ ವೃದ್ಧಿ

by Shwetha
June 12, 2025
0

ಪ್ಯೂ ಸಂಶೋಧನಾ ಕೇಂದ್ರದಿಂದ ಬಿಡುಗಡೆಗೊಂಡಿರುವ ಹೊಸ ಅಧ್ಯಯನ ವರದಿಯ ಪ್ರಕಾರ, 2010ರಿಂದ 2020ರ ವರೆಗೆ ಮುಸ್ಲಿಮರು ವಿಶ್ವದಾದ್ಯಾಂತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪಾಗಿದ್ದಾರೆ. ವರದಿ ಪ್ರಕಾರ,...

ಹಳೆಯ ಸಚಿವರು ಜಿಡ್ಡು ಹಿಡಿದು ಹೋಗಿದ್ದಾರೆ, ಹೊಸಬರಿಗೆ ಅವಕಾಶ ಕೊಡಿ: ಶಿವಗಂಗಾ ಬಸವರಾಜ್

ಹಳೆಯ ಸಚಿವರು ಜಿಡ್ಡು ಹಿಡಿದು ಹೋಗಿದ್ದಾರೆ, ಹೊಸಬರಿಗೆ ಅವಕಾಶ ಕೊಡಿ: ಶಿವಗಂಗಾ ಬಸವರಾಜ್

by Shwetha
June 12, 2025
0

ಕಾಂಗ್ರೆಸ್ ಶಾಸಕರೇ ತಮ್ಮ ಪಕ್ಷದ ಸರ್ಕಾರದ ಕಾರ್ಯಶೈಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಶಾಸಕ ಶಿವಗಂಗಾ ಬಸವರಾಜ್ ಸ್ಪಷ್ಟವಾಗಿ ಹೇಳಿಕೆ ನೀಡಿದ್ದು, ಕೆಲ ಹಳೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram