Rajasthan: ಸಿ ಎಂ ಕುರ್ಚಿಯತ್ತ ಸಾಗಲು ಪೈಲಟ್ ಪ್ರಯತ್ನ…
ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜಸ್ಥಾನದ ಹೊಸ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದು ಸಹ ಕುತೂಹಲ ಮೂಡಿಸಿದೆ.
ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ಅವರು ಗುರುವಾರ ಕೇರಳದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದ್ದು, ಪಕ್ಷದ ಅಧ್ಯಕ್ಷರಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗೆಹ್ಲೋಟ್ ಕೂಡ ಖಚಿತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾದ ಸಚಿನ್ ಪೈಲಟ್ ಶುಕ್ರವಾರ ಜೈಪುರ ತಲುಪಿ ಶಾಸಕರೊಂದಿಗೆ ಲಾಬಿ ಆರಂಭಿಸಿದ್ದಾರೆ. ವಿಧಾನಸಭೆಯ ಸ್ಪೀಕರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಿಪಿ ಜೋಶಿ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ.
ಸಿಪಿ ಜೋಶಿ ಅವರು ಅಶೋಕ್ ಗ್ಲೆಹೋಟ್ ಆಪ್ತರಾಗಿದ್ದು, ತನ್ನ ಉತ್ತರಾಧಿಕಾರಿಯಾಗಿ ಜೋಶಿ ಅವರಿಗೆ ಪಟ್ಟಾಭಿಶೇಕ ಮಾಡುವಂತೆ ರಾಜಸ್ಥಾನ ಸಿ ಎಂ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಸಚಿನ್ ಪೈಲಟ್ ವಿಧಾನಸಭೆಗೆ ಆಗಮಿಸಿ ತಮ್ಮ ಬೆಂಬಲಿಗ ಶಾಸಕರನ್ನು ಭೇಟಿ ಮಾಡಿದರು. ಅವರು ಗೆಹ್ಲೋಟ್ ಬೆಂಬಲಿಗರಾದ ಗಿರ್ರಾಜ್ ಮಾಲಿಂಗ ಮತ್ತು ಸ್ವತಂತ್ರ ಶಾಸಕ ಖುಷ್ವೀರ್ ಜೋಜಾವರ್ ಅವರನ್ನು ಭೇಟಿಯಾಗಿದ್ದಾರೆ.
ಎಲ್ಲಾ ಬಣಗಳ ಕಾಂಗ್ರೆಸ್ ಶಾಸಕರೊಂದಿಗೆ ಪೈಲಟ್ ಮಾತುಕತೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ಕಾಲದಲ್ಲಿ ಅವರ ಕಟ್ಟಾ ವಿರೋಧಿಗಳೆಂದು ಪರಿಗಣಿಸಲ್ಪಟ್ಟ ಶಾಸಕರು ಇವರಲ್ಲಿ ಸೇರಿದ್ದಾರೆ.