ಚಂದನವನದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪತ್ನಿ ಸ್ಪಂದನಾಗೆ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬ್ಯಾಂಕಾಕ್ ಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಲೋ ಬಿಪಿ ಹಾಗೂ ಹೃದಯಾಘಾತವಾಗಿತ್ತು ಎಂಬ ಕುರಿತು ಮಾಹಿತಿ ಲಭ್ಯವಾಗಿದೆ. ಇನ್ನಷ್ಟೇ ಸಂಪೂರ್ಣ ಮಾಹಿತಿ ಸಿಗಬೇಕಿದೆ. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಪುನೀತ್ ರಾಜ್ಕುಮಾರ್ ಸೇರಿದಂತೆ ಅನೇಕ ನಟ-ನಟಿಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸ್ಪಂದನಾ ಅವರು ಕೂಡ ನಿಧನರಾಗಿದ್ದು, ಅಭಿಮಾನಿಗಳಲ್ಲಿ ಬೇಸರ ತಂದಿದೆ. ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.
ಸ್ಪಂದನಾ ಅವರು ಬೆಂಗಳೂರಿನವರು. ಅವರ ತಂದೆ ಬಿ.ಕೆ. ಶಿವರಾಮ್ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 2007ರ ಆಗಸ್ಟ್ 26ರಂದು ವಿಜಯ್-ಸ್ಪಂದನಾ ಮದುವೆ ಆಗಿತ್ತು. ಈ ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ. ಆದರೆ, ಸ್ಪಂದನ ಸಾವನ್ನಪ್ಪಿದ್ದು, ಎಲ್ಲರಿಗೂ ಆಘಾತವಾಗಿದೆ. 2016ರಲ್ಲಿ ಸ್ಪಂದನಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ವಿ. ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ಸ್ಪಂದನಾ ನಟಿಸಿದ್ದರು. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಪತ್ನಿಯಾಗಿ ನಟಿಸಿದ್ದರು. ಅಭಿಮಾನಿಗಳು ಸದ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.







