ಬೆಂಗಳೂರು : ಕೊರೊನಾ ಲಾಕ್ ಡೌನ್ ನಡುವೆ ಚಂದನವನದ ತಾರೆಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದರಂತೆ ಇದೀಗ ನಟ ವಿನಾಯಕ್ ಜೋಷಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಹೌದು..! ನಟ ವಿನಾಯಕ್ ಜೋಷಿ ತಮ್ಮ ಬಹುಕಾಲದ ಗೆಳತಿ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷಾ ಬೆಳವಾಡಿ ಅವರನ್ನು ವರಿಸಲಿದ್ದಾರೆ. ವರ್ಷಾ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ಅನೇಕ ಅಂತರಾಷ್ಟ್ರಿಯ ಪಂದ್ಯಾವಳಿಗಳಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಕಳೆದ ವರ್ಷ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಪ್ರಸ್ತುತ ವರ್ಷಾ ಒಂದು ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ವರ್ಷಾ ಅವರು ಬ್ಯಾಡ್ಮಿಂಟನ್ ಆಟಗಾರ್ತಿ ಮಾತ್ರವಲ್ಲದೇ ಒಂದು ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾ ರಿಲೀಸ್ ಆಗುವುದು ಬಾಕಿ ಇದೆ.
ಇನ್ನು ವಿನಾಯಕ್ ಜೋಷಿ ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಲಾಲಿ’, ‘ಅಪ್ಪು’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೊದಲ ಸೀಸನ್ ನಲ್ಲಿ ವಿನಾಯಕ್ ಸ್ಪರ್ಧಿಸಿದ್ದರು.
ಸದ್ಯದಲ್ಲೇ ವಿನಾಯಕ್ ಜೋಷಿ ತಮ್ಮ ಗೆಳತಿ ವರ್ಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.








