‘ನನ್ನ ಸಹೋದರ ಅಪ್ಪು ಓದಿಸುತ್ತಿದ್ದ 1800+ ವಿದ್ಯಾರ್ಥಿಗಳ ಜವಾಬ್ದಾರಿ ನನ್ನದು’ ಎಂದ ತಮಿಳು ಖ್ಯಾತ ನಟ ವಿಶಾಲ್
ಪುನೀತ್ ರಾಜ್ಕುಮಾರ್ ಓದಿಸುತ್ತಿದ್ದ 1800+ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ನನ್ನದು ಎಂದು ತಮಿಳು ನಟ ವಿಶಾಲ್ ರವಿವಾರ ಘೋಷಣೆ ಮಾಡಿದ್ದಾರೆ. ಎನಿಮಿ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ವೇಳೆ ಪುನೀತ್ ರಾಜಕುಮಾರ್ಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಈ ವೇಳೆ ನಟ ವಿಶಾಲ್ ಪುನಿತ್ ಅವರಿಗೆ ಸಂತಾಪ ಸೂಚಿಸಿ ಮಾತನಾಡುತ್ತಾ, ಒಂದು ಸರ್ಕಾರ ಮಾಡಬೇಕಾದಷ್ಟು ಕೆಲಸವನ್ನು ಪುನೀತ್ ಒಬ್ಬರೇ ಮಾಡುತ್ತಿದ್ದರು. ಎಷ್ಟೋ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಅದಕ್ಕಿಂತಲೂ ಹೆಚ್ಚಾಗಿ 1,800 ಬಡ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು. ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.
ಅಪ್ಪು ಅಗಲಿಕೆಯಿಂದ ಬಹಳ ನೋವಾಗಿದೆ.ಮುಂದಿನ ವರ್ಷದಿಂದ ನನ್ನ ಸಹೋದರ ಪುನೀತ್ ರಾಜ್ಕುಮಾರ್ ಪರವಾಗಿ ನಾನು ಆ 1800 ವಿದ್ಯಾರ್ಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಈ ಬಗ್ಗೆ ಅವರ ಕುಟುಂಬದೊಂದಿಗೆ ಒಪ್ಪಿಗೆ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಇನ್ನು ನಟ ವಿಶಾಲ್ ಅವರ ಮಾನವೀಯ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.