ಬೆಂಗಳೂರು : ಡ್ರಗ್ ಮಾಫಿಯಾ ವಿಚಾರವಾಗಿ ಸಿಸಿಬಿ ಅಧಿಕಾರಿಗಳು ಕೆಲವರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಮಹತ್ವದ ಸುಳಿವುಗಳು ಸಿಕ್ಕಿವೆ. ಕೆಲ ಸಿನಿಮಾ ನಟರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಡ್ರಗ್ ಮಾಫಿಯಾ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ, ನಾವು ಸತತವಾಗಿ ಡ್ರಗ್ ಜಾಲದ ಮೇಲೆ ರೇಡ್ ಮಾಡುತ್ತಿದ್ದೇವೆ. ತಂತ್ರಜ್ಞಾನ ಬಳಸಿ ಎಲ್ಲೆಲ್ಲಿ ಸಪ್ಲೈ ಎಲ್ಲೆಲ್ಲಿ ಆಗ್ತಿದೆ ಆಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸುತ್ತಿದೆ. ಸ್ವಯಂ ಹೇಳಿಕೆ ಕೊಟ್ಟವರೂ ಮಹತ್ವದ ಸುಳಿವನ್ನು ಕೊಟ್ಟಿದ್ದಾರೆ. ಕೇವಲ ಸಿಸಿಬಿ ಮಾತ್ರವಲ್ಲ, ಎಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕ್ರೈಂ ಬ್ರ್ಯಾಂಚ್ ಹೆಚ್ಚು ಜಾಗೃತವಾಗಿರುವಂತೆ ಸೂಚಿಸಿದ್ದೇವೆ ಎಂದು ವಿವರಿಸಿದರು.
ಡ್ರಗ್ಸ್ ದಂಧೆ ಕುರಿತು ಹೇಳಿಕೆ ಕೊಟ್ಟವರನ್ನು ಕರೆದು ವಿಚಾರ ಮಾಡುತ್ತಿದೆ. ನಮ್ಮದೇ ಆದ ಮಾಹಿತಿಯಿಂದ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಾಲ ಪತ್ತೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ರೇವ್ ಪಾರ್ಟಿ ಗಳಲ್ಲಿ ಭಾಗಿಯಾದವರ ಬಗ್ಗೆ ತನಿಖೆ ನಡೆಯುತ್ತಿದೆ. ಸಾಕ್ಷಿ ಆಧಾರ ಕಲೆ ಹಾಕಲಾಗುತ್ತಿದ್ದು, ಬರುವ ದಿನಗಳಲ್ಲಿ ಮಟ್ಟ ಹಾಕಲು ಕ್ರಮ ಆಗುತ್ತೆ ಎಂದರು.








